ADVERTISEMENT

ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 14:02 IST
Last Updated 4 ಫೆಬ್ರುವರಿ 2019, 14:02 IST
ಎಸ್‌.ಆರ್‌. ಉಮಾಶಂಕರ್‌
ಎಸ್‌.ಆರ್‌. ಉಮಾಶಂಕರ್‌   

ದಾವಣಗೆರೆ: ಭದ್ರಾ ಕಾಲುವೆ ಹಾಗೂ ನದಿ ದಂಡೆಯಲ್ಲಿನ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬರ ಪರಿಶೀಲನಾ ಸಭೆ ನಡೆಸಿದ ಅವರು, ‘ಭದ್ರಾ ಕಾಲುವೆ ಹಾಗೂ ತುಂಗಭದ್ರಾ ನದಿಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಹೆಚ್ಚಿದೆ. ಇದರ ಪರಿಣಾಮ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಕಾರ ಪಡೆದು ಅಧಿಕಾರಿಗಳ ತಂಡ ರಚಿಸಿಕೊಂಡು ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ’ ಎಂದು ಆದೇಶಿಸಿದರು.

‘ಕೊನೆಯ ಭಾಗಕ್ಕೆ ನೀರು ಹರಿಯುವುದಿಲ್ಲ ಎಂಬ ಕೂಗು ನಿವಾರಣೆಯಾಗಬೇಕು. ಕಟ್ಟುನಿಟ್ಟಿನಿಂದ ಕಾರ್ಯಾಚರಣೆ ನಡೆಸುವ ಮೂಲಕ ಕೊನೆ ಭಾಗಕ್ಕೆ ನೀರು ಹರಿಸುವ ಅಭ್ಯಾಸವನ್ನು ಮಾಡಿಸಬೇಕು. ನೀರಾವರಿ ಜೊತೆಗೆ ಕುಡಿಯುವ ನೀರು ಸಹ ಅಗತ್ಯ ಇರುವುದರಿಂದ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು’ ಎಂದು ಉಮಾಶಂಕರ್‌ ಸೂಚಿಸಿದರು.

ADVERTISEMENT

ವಾರಕ್ಕೆ 2 ಬಾರಿ ನೀರು

‘ದಾವಣಗೆರೆ ನಗರಕ್ಕೆ ನಿತ್ಯ 80 ಎಂ.ಎಲ್‌.ಡಿ ನೀರು ಅಗತ್ಯವಾಗಿದೆ. 30 ಎಂ.ಎಲ್‌.ಡಿ ಕೊರತೆಯಾಗುತ್ತಿರುವುದರಿಂದ ವಾರಕ್ಕೆ ಒಂದು ಬಾರಿ ಮಾತ್ರ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಈಗ ಮೈಲಾರ ಜಾತ್ರೆ ಸಲುವಾಗಿ ತುಂಗಭದ್ರಾ ನದಿಗೆ ಹರಿಸಿರುವ ನೀರು ರಾಜನಹಳ್ಳಿ ಜಾಕ್‌ವೆಲ್‌ ಬಳಿ ಬಂದಿದೆ. ಹೀಗಾಗಿ ಮತ್ತೆ ವಾರಕ್ಕೆ ಎರಡು ಬಾರಿ ನೀರು ಪೂರೈಸಲಾಗುವುದು’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.