ADVERTISEMENT

ಹೊನ್ನಾಳಿ: ರೇಣುಕಾಚಾರ್ಯ ಪ್ರಚಾರ

​ಪ್ರಜಾವಾಣಿ ವಾರ್ತೆ
Published 7 ಮೇ 2023, 15:56 IST
Last Updated 7 ಮೇ 2023, 15:56 IST
ಹೊನ್ನಾಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಪರ ನಟ ಪ್ರಥಮ್  ಮತಯಾಚಿಸಿದರು.
ಹೊನ್ನಾಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಪರ ನಟ ಪ್ರಥಮ್  ಮತಯಾಚಿಸಿದರು.   

ಹೊನ್ನಾಳಿ: ‘ಎಂ.ಪಿ.ರೇಣುಕಾಚಾರ್ಯ ಅವರು ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಗಟ್ಟಿಗರು. ಆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಅವರ ನೇರ ನುಡಿ ಮತ್ತು ಜನಸೇವೆ ನನಗಿಷ್ಟ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ ರಾಜ್ಯಕ್ಕೆ ಮಾದರಿ. ಇದರಿಂದ ಅವರು ಕರೆಯದೇ ಇದ್ದರೂ ಅವರ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ’ ಎಂದು ನಟ ಪ್ರಥಮ್ ಹೇಳಿದರು.

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮತದಾನವಾಗುತ್ತದೆ. ಆದರೆ ನಗರ ಪ್ರದೇಶದಲ್ಲಿ ಮತದಾನ ಕಡಿಮೆ. ಹೀಗಾಗಿ ನಾವು ಮತದಾನ ಹೆಚ್ಚು ಆಗುವಂತೆ ನೋಡಿಕೊಳ್ಳಬೇಕು. ಎಂ.ಪಿ.ರೇಣುಕಾಚಾರ್ಯರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಮತದಾನ ಪ್ರತಿಯೊಬ್ಬರ ಹಕ್ಕು. ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು. ರೇಣುಕಾಚಾರ್ಯ ಅವರು ಈ ತಾಲ್ಲೂಕಿನ ಜನರನ್ನು ಸಂಪಾದನೆ ಮಾಡಿದ್ದಾರೆ. ಹೀಗಾಗಿ ಜನರು ಅವರು ಕರೆದಾಗಲೆಲ್ಲಾ ಅವರ ಕಾರ್ಯಕ್ರಮಗಳಿಗೆ ಹೆಚ್ಚು ಸೇರುತ್ತಾರೆ. ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರೇಣುಕಾಚಾರ್ಯರನ್ನು ಗೆಲ್ಲಿಸಬೇಕು’ ಎಂದು ಮಜಾ ಟಾಕೀಸ್ ಖ್ಯಾತಿಯ ಹಾಸ್ಯ ನಟ ಪವನ್ ಮನವಿ ಮಾಡಿದರು.

‘ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್‌ ‘ಬಜರಂಗಿ’ಗೆ ಅವಮಾನ ಮಾಡುತ್ತಿದೆ. ಅದನ್ನು ಸೋಲಿಸಬೇಕು’ ಎಂದು ಬಿಜೆಪಿ ಚುನಾವಣಾ ವೀಕ್ಷಕ ಗುಜರಾತ್‌ನ ಭರತ್ ಡಂಗೂರ ಹೇಳಿದರು.

‘ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಜನರು ದಾವಣಗೆರೆಗೆ ಪದೇ ಪದೇ ಓಡಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾ ಕೇಂದ್ರದಲ್ಲಿದ್ದ ಕೃಷಿ ಉಪವಿಭಾಗವನ್ನು ಹಾಗೂ ಕಂದಾಯ ಉಪವಿಭಾಗವನ್ನು ಹೊನ್ನಾಳಿಗೆ ತಂದಿದ್ದೇನೆ. ನೂರಾರು ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದೇನೆ. ನೂರಾರು ಕಾಮಗಾರಿಗಳನ್ನು ಅವಳಿ ತಾಲ್ಲೂಕಿಗೆ ತಂದು ಅಭಿವೃದ್ಧಿ ಮಾಡಿದ್ದೇನೆ. ಮತ ನೀಡಿ ಬೆಂಬಲಿಸಬೇಕು’ ಎಂದು ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿದೆ. ತಾಕತ್ತಿದ್ದರೆ ನಿಷೇಧ ಮಾಡಲಿ’ ಎಂದು ಸವಾಲ್ ಹಾಕಿದ ಅವರು, ‘ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ ನಡೆಯುವ ಮೂರು ಹಬ್ಬಗಳಿಗೆ 3 ಅಡುಗೆ ಅನಿಲ ಸಿಲಿಂಡರ್ ಅನ್ನು ಉಚಿತವಾಗಿ ಕೊಡುತ್ತೇವೆ’ ಎಂದು ಹೇಳಿದರು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗರಾಜ್ ಮಾದೇನಹಳ್ಳಿ, ಪಟ್ಟಣ ಪಂಚಾಯಿತಿ ಸದಸ್ಯೆ ಸವಿತಾ ಮಹೇಶ್ ಹುಡೇದ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಪ್ಪ, ಕುಬೇರಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಸಿ.ಆರ್. ಶಿವಾನಂದ್ ಇದ್ದರು.

3ಇಪಿ : ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮತಯಾಚನೆ ಮಾಡಿ ಮಾತನಾಡಿದರು.
4ಇಪಿ : ಹೊನ್ನಾಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಾಲ್ಲೂಕಿನ ನೊಳಂಬ ವೀರಶೈವ ಸಮಾಜದ ಸಾವಿರಾರು ಜನರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.