ADVERTISEMENT

‘ಎಂ.ಪಿ. ರೇಣುಕಾಚಾರ್ಯರಿಂದ ಕೀಳುಮಟ್ಟದ ರಾಜಕೀಯ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 11:00 IST
Last Updated 3 ಜುಲೈ 2020, 11:00 IST

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಎಚ್‌. ಕಡದಕಟ್ಟೆ ಗ್ರಾಮ ಪಂಚಾಯಿತಿಯ ಆಡಳಿತ ತಮ್ಮ ಹಿಡಿತದಲ್ಲಿರಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಪಿಡಿಒ ನೇಮಕ ಸಂಬಂಧ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆಯ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್‌ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಭ್ರಷ್ಟಾಚಾರಕ್ಕೆ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಿಡಿಒ ಸಹಕಾರ ನೀಡುತ್ತಿಲ್ಲ ಎಂದು ಮೂಲ ಪಿಡಿಒ ವಿಜಯಗೌಡರ್‌ ಅವರನ್ನು ವರ್ಗಾವಣೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಜಗಳೂರು ತಾಲ್ಲೂಕಿನ ಹನುಮಂತಾಪುರ ಪಿಡಿಒ ಜಯಕುಮಾರ್‌ ಅವರನ್ನು ನಿಯೋಜನೆ ಮಾಡಿಸಿದ್ದರು. ಆದರೆ ಜಯಕುಮಾರ್ಅಮಾನತುಗೊಂಡಿರುವ ಕಾರಣ ಪಂಚಾಯಿತಿಗೆ ಪಿಡಿಒ ಇಲ್ಲ. ತಮ್ಮ ಜವಾಬ್ದಾರಿ ಮರೆತು ಗ್ರಾಮ ಪಂಚಾಯಿತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪಿಡಿಒ ಹಾಗೂ ಕಾರ್ಯದರ್ಶಿಗಳನ್ನು ಸರ್ಕಾರದ ಅನುಮತಿ ಇಲ್ಲದೇ ವರ್ಗಾವಣೆ ಹಾಗೂ ನಿಯೋಜನೆ ಮಾಡಲು ಯಾವುದೇ ಅಧಿಕಾರಿ ಅಥವಾ ಶಾಸಕರಿಗೆ ಅಧಿಕಾರ ಇಲ್ಲ. ಆದರೂ ತಮ್ಮ ಪ್ರಭಾವ ಬಳಿಸಿ ವಿಜಯಗೌಡರ್‌ ಅವರನ್ನು ಬೆಳಗುತ್ತಿಗೆ ನಿಯೋಜನೆ ಮಾಡಿ ಸರ್ಕಾರದ ಆದೇಶವನ್ನು ಶಾಸಕರು ಉಲ್ಲಂಘಿಸಿದ್ದಾರೆ. ಅಮಾನತುಗೊಂಡಿರುವಜಯಕುಮಾರ್ ಅವರನ್ನೇ ಎಚ್‌. ಕಡದಕಟ್ಟೆಗೆ ನೇಮಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ವೇದಿಕೆ ರಾಜ್ಯಾಧ್ಯಕ್ಷ ಎ. ಉಮೇಶ್‌, ‘ರೇಣುಕಾಚಾರ್ಯ ಅವರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಲು ಕಸರತ್ತು ನಡೆಸುವಂತಿದೆ. ಅಂತಹ ಆಸಕ್ತಿ ಇದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿ. ಜವಾಬ್ದಾರಿ ಸ್ಥಾನದಲ್ಲಿರುವವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ಈ ಸಂಬಂಧ ‘ಜನಪ್ರತಿನಿಧಿಗಳ ನ್ಯಾಯಾಲಯ’ದ ಮೊರೆ ಹೋಗುತ್ತೇವೆ’ ಎಂದರು.

ವೇದಿಕೆಯ ಉಮೇಶ್‌ ಹಿರೇಮಠ, ಹನುಮಂತಪ್ಪ ಸೊರಟೂರು, ಎಚ್‌. ಕಡದಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.