ADVERTISEMENT

ಶಾಂತಿಸಾಗರ ಸರ್ವೆಗೆ ಸ್ಪಂದಿಸದ ಜನಪ್ರತಿನಿಧಿಗಳು: ಆರೋಪ

ಸಂಸದ, ಶಾಸಕರು ಕ್ರಮ ಖಂಡಿಸಿ ಇಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 13:51 IST
Last Updated 17 ನವೆಂಬರ್ 2019, 13:51 IST

ದಾವಣಗೆರೆ: ಶಾಂತಿಸಾಗರ ಸರ್ವೆ ಕಾರ್ಯಕ್ಕೆ ಸ್ಪಂದಿಸದ ಸಂಸದ, ಶಾಸಕರು ಕೆರೆಗೆ ಬಾಗಿನ ಅರ್ಪಿಸಲು ಮುಂದಾಗಿರುವುದನ್ನು ಖಂಡಿಸಿ ನ. 17ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಖಡ್ಗ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ಬೆಳ್ಳೂಡಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆರೆ ಸರ್ವೆಗೆ 6ತಿಂಗಳ ಹಿಂದೆಯೇ ₹ 11 ಲಕ್ಷ ಅನುದಾನ ಬಂದಿದ್ದರೂ ಇನ್ನೂ ಸರ್ವೆ ಆಗಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಶೀಘ್ರ ಸರ್ವೆ ಮಾಡಬೇಕು. 2014ರ ಬಳಿಕ ಈಚೆಗೆ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಷಣ್ಮುಖಯ್ಯ ಕೆ., ‘ಸರ್ವೆ ಕಾರ್ಯಕ್ಕೆ ಸ್ಪಂದಿಸದ ಸಂಸದ, ಶಾಸಕರಿಗೆ ಬಾಗಿನ ಅರ್ಪಿಸಲು ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

2000ದವರೆಗೂ ಚನ್ನಗಿರಿಗೆ ಸೀಮಿತವಾಗಿದ್ದ ಸೂಳೆಕೆರೆ ಬಳಿಕ ದಾವಣಗೆರೆ, ಚಿತ್ರದುರ್ಗಕ್ಕೂ ಸೇರಿದೆ. ಆದರೆ ಕೆರೆ ಉಳಿಸುವ ಕಾರ್ಯಕ್ಕೂ ಯಾವುದೇ ಜನಪ್ರತಿನಿಧಿಗಳು ಸ್ಪಂದಿಸದೆ ಅನ್ಯಾಯ ಮಾಡುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯಾದ ಕೆರೆಯ ಸರ್ವೆ ಕಾರ್ಯಕ್ಕೆ ಮುಂದಾಗಿ ಕೆರೆಯನ್ನು ಉಳಿಸದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನ. 17ರಂದು ಕೆರೆಗೆ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ. ಅವರಿಗೆ ನೈತಿಕತೆ ಇಲ್ಲ. ಕೆಲವರನ್ನು ಉಳಿಸಲು ಹೋಗಿ ನೂರಾರು ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಕಾರ್ಯದರ್ಶಿ ಚಂದ್ರಹಾಸ ಬಿ.,‘ಸರ್ವೆ ಕಾರ್ಯಕ್ಕೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದಾಗ ಕೆರೆಗೆ ನಮಗೂ ಸಂಬಂಧ ಇಲ್ಲ ಎಂದು ಸಂಸದ, ಶಾಸಕರು ಈಗ ಏಕೆ ಬಾಗಿನ ಅರ್ಪಿಸುತ್ತಿದ್ದಾರೆ. ರಾಜಕೀಯ ಬಿಟ್ಟು ಕೆರೆ ಉಳಿಸಲು ಮುಂದಾಗಿ’ ಎಂದು ಆಗ್ರಹಿಸಿದರು.

ಸಂಘದ ಕುಬೇಂದ್ರಸ್ವಾಮಿ ಟಿ., ಮಹಮ್ಮದ್‌ ಶಬ್ಬೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.