ADVERTISEMENT

ಪ್ರಶಾಂತ್ ಭೂಷಣ್ ವಿರುದ್ಧ‌ದ ತೀರ್ಪು ಪುನರ್ ಪರಿಶೀಲನೆಗೆ ಮನವಿ

ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ದಾವಣಗೆರೆ ಪ್ರಗತಿರ ವಕೀಲರ ವೇದಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 15:46 IST
Last Updated 16 ಆಗಸ್ಟ್ 2020, 15:46 IST
ಅನೀಸ್‌ ಪಾಷಾ
ಅನೀಸ್‌ ಪಾಷಾ   

ದಾವಣಗೆರೆ: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನೀಡಿದ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಇಲ್ಲಿನ ಪ್ರಗತಿಪರ ವಕೀಲರ ಸಂಘ ಮನವಿ ಸಲ್ಲಿಸಿದೆ.

ಆ.14ರಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದಂತಹ ಹಲವು ತೀರ್ಪುಗಳಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌, ಟ್ವಿಟರ್, ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಚಾರಗಳು ನಿರ್ಣಾಯಕ ಸಾಕ್ಷ್ಯವಾಗಿ ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿದೆ. ಹಿರಿಯ ವಕೀಲರು ಮಾಡಿರುವಂತಹ ಆರೋಪಗಳು ಸರಿ ಇದೆಯೋ ಇಲ್ಲವೋ ಎಂದು ತನಿಖೆ ನಡೆಸದೆ ನೇರವಾಗಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿ ಒಬ್ಬ ಸಾಮಾಜಿಕ ಹೋರಾಟಗಾರರಾದ ವಕೀಲರನ್ನು ಶಿಕ್ಷಿಸುವುದು ಸರಿಯಾದ ಕ್ರಮವಲ್ಲ ಎಂಬುದು ಜನರ ಅನಿಸಿಕೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಕಾಲದಲ್ಲಿ ತುರ್ತು ಪ್ರಕರಣಗಳನ್ನು ಕೂಡ ಆನ್‌ಲೈನ್ ಮುಖಾಂತರ ಮಂಡನೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಳೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದನ್ನು ಬಿಟ್ಟು ಹೊಸ ಪ್ರಕರಣವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡು ತೀರ್ಪು ನೀಡಿರುವುದು ಜನರಿಗೆ ಆಶ್ಚರ್ಯ ಉಂಟುಮಾಡಿದೆ. ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಮತ್ತು ವಕೀಲ ವೃಂದದ ಘನತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ವಿವರಿಸಲಾಗಿದೆ.

ADVERTISEMENT

ನೇರ ಸಾಕ್ಷ್ಯಾಧಾರಗಳು ಇರುವ ನ್ಯಾಯಾಂಗ ನಿಂದನೆಯ ಹಳೆಯ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇರುತ್ತವೆ. ಉದಾಹರಣೆಗೆ ಬಾಬ್ರಿ ಮಸೀದಿಯ ಕಲ್ಯಾಣ್ ಸಿಂಗ್ ವಿರುದ್ಧದ ನ್ಯಾಯಾಂಗ ನಿಂದನೆಯ ಪ್ರಕರಣ 28 ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎಂದು ತಿಳಿಸಲಾಗಿದೆ.

ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವೀಟ್‌ಗಳಲ್ಲಿ ಆರೋಪಿಸಿದಂತಹ ಅಂಶಗಳು ಸರಿಯೇ ತಪ್ಪೇ ಎಂದು ತನಿಖೆ ಮಾಡಲು ನ್ಯಾಯಮೂರ್ತಿಗಳ ಒಂದು ತಂಡವನ್ನು ರಚಿಸಬೇಕು. ಆರೋಪಗಳಲ್ಲಿ ಹುರುಳಿಲ್ಲ ಎಂದು ಕಂಡುಬಂದಾಗ ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಿದರೆ ಜನರು ನ್ಯಾಯಾಲಯದ ಮೇಲೆ ಇಟ್ಟಿರುವ ಗೌರವ ಮತ್ತು ಘನತೆಯು ಇನ್ನೂ ಹೆಚ್ಚಾಗುತ್ತದೆ. ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಂತಾಗುವುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ರಿಜಿಸ್ಟ್ರಾರ್ ಮೂಲಕ ಇ–ಮೇಲ್‌ ಕಳುಹಿಸಲಾಗಿದೆ ಎಂದು ಪ್ರಗತಿಪರ ವಕೀಲರ ವೇದಿಕೆಯ ಸಂಚಾಲಕ ಅನೀಸ್‌ ಪಾಷಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.