ADVERTISEMENT

ಕಂಟೈನ್‌ಮೆಂಟ್ ವಲಯಗಳಿಗೆ ಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 12:24 IST
Last Updated 9 ಜೂನ್ 2020, 12:24 IST
ಕಾಂಗ್ರೆಸ್‌
ಕಾಂಗ್ರೆಸ್‌   

ದಾವಣಗೆರೆ: ಕಂಟೈನ್‌ಮೆಂಟ್ ವಲಯಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಅವರಿಗೆ ಅಗತ್ಯವಾದ ದಿನಸಿ, ಹಾಲು ಹಾಗೂ ಕಿಟ್‌ ಒದಗಿಸಬೇಕು ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ‘ಜಾಲಿನಗರದಲ್ಲಿ 8 ಕಂಟೈನ್‌ಮೆಂಟ್ ವಲಯಗಳು ಇದ್ದು, ಒಂದು ಕಂಟೈನ್‌ಮೆಂಟ್ ವಲಯದಲ್ಲಿ 60ರಿಂದ 70 ಮನೆಗಳು ಸೇರಿಕೊಳ್ಳುತ್ತವೆ. ಎರಡು ತಿಂಗಳಿಂದಲೂ ಈ ಭಾಗ ಸೀಲ್‌ಡೌಲ್ ಆಗಿದ್ದು, ಕಾರ್ಮಿಕರು ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಪ್ರದೇಶದಲ್ಲಿರುವ ಕಾರ್ಮಿಕರು ಕೆಲಸ ಮಾಡಿದರಷ್ಟೇ ಹಣ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಸಂಕಷ್ಟದಲ್ಲಿ ಇದ್ದಾರೆ. ಪಾಲಿಕೆಯಿಂದ ಇವರಿಗೆ ಕಿಟ್‌ಗಳನ್ನು ವಿತರಿಸಿದ್ದು, ಒಂದು ವಾರಕ್ಕೆ ಸಾಕಾಗುತ್ತದೆ. ದಿನಸಿ ಹಾಗೂ ತರಕಾರಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳಿದೆ. ಆದರೆ ಅದನ್ನು ಕೊಂಡುಕೊಳ್ಳಲು ಅವರ ಬಳಿ ಹಣವಿಲ್ಲ. ಆದ್ದರಿಂದ ಕನಿಷ್ಠಪಕ್ಷ ಹಾಲು ಹಾಗೂ ತರಕಾರಿಯನ್ನಾದರೂ ಉಚಿತವಾಗಿ ನೀಡಿದರೆ ಬದುಕಬಹುದು ಎಂದು ಹೇಳಿದರು.

ADVERTISEMENT

ಪಾಲಿಕೆ ಸದಸ್ಯ ಕೆ ಚಮನ್‌ಸಾಬ್ ಮಾತನಾಡಿ, ‘ಕ್ವಾರಂಟೈನ್‌ನಲ್ಲಿ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ. ಬಿಪಿ, ಶುಗರ್‌ ರೋಗಿಗಳಿಗೆ ಮಾತ್ರೆಗಳೂ ಸಿಗುತ್ತಿಲ್ಲ. ಇದರಿಂದಾಗಿ ಮರಣ ಹೊಂದಿದ ಪ್ರಸಂಗವೂ ಜಿಲ್ಲೆಯಲ್ಲಿದೆ. ಕ್ವಾರಂಟೈನ್‌ನಲ್ಲಿರುವವರಿಗೆ ಪ್ರತಿದಿನ ಕೇವಲ ಅನ್ನ, ಸಾಂಬಾರ್ ನೀಡುತ್ತಿದ್ದಾರೆ. ಅದಕ್ಕಾಗಿಯೇ ಇಂದು ಕ್ವಾರಂಟೈನ್‌ಗಳಿಗೆ ಹೋಗಲು ಜನರು ಹೆದರುತ್ತಿದ್ದಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್‌ ಮಾತನಾಡಿ, ‘ಕಂಟೈನ್‌ಮೆಂಟ್‌ ಜೋನ್‌ ನಲ್ಲಿರುವವರನ್ನು ಯಾರು ಕೆಲಸಕ್ಕೆ ಕರೆದುಕೊಳ್ಳುತ್ತಿಲ್ಲ. ರೋಗ ವಿರೋಧಿಸೋಣ. ಆದರೆ ವ್ಯಕ್ತಿಯನ್ನು ವಿರೋಧಿಸುವುದು ಸರಿಯಲ್ಲ’ ಎಂದರು.

‘ರ‍್ಯಾ‍ಪಿಡ್‌ ಟೆಸ್ಟ್‌ ಮಾಡಲು ಹಿಂದೇಟು’
‘ಕೋರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರ‍್ಯಾ‍ಪಿಡ್‌ ಟೆಸ್ಟ್‌ ಮಾಡಲು ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಲಹೆ ನೀಡಿದ್ದರೂ, ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾಸ್ಪತ್ರೆ ಸೇರಿ ದಾವಣಗೆರೆಯಲ್ಲಿ 3 ಲ್ಯಾಬ್‌ಗಳಿವೆ. ನಿತ್ಯ 300 ಟೆಸ್ಟ್‌ ಮಾಡುವ ಸಾಮರ್ಥ್ಯ‌ವಿದೆ. ಆದ್ದರಿಂದ ಪ್ರತಿ ವಾರ್ಡ್‌ನಲ್ಲೂ ರ‍್ಯಾಪಿಡ್‌ ಟೆಸ್ಟ್‌ ಮಾಡಬೇಕು. ಜಿಲ್ಲಾಡಳಿತದ ಬಳಿ ₹20 ಕೋಟಿ ಹಣವಿದೆ ಅದನ್ನು ಕೋರೋನಾದಂತಹ ಕಷ್ಟ ಕಾಲದಲ್ಲಿ ಬಳಕೆ ಮಾಡಿದರೆ ಉತ್ತಮ’ ಎಂದು ವಿಪಕ್ಷ ನಾಯಕ ಎ.ನಾಗರಾಜ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ವಿನಾಯಕ್‌ ಪೈಲ್ವಾನ್‌, ಮಂಜುನಾಥ್‌, ಸೈಯದ್‌ ಚಾರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.