ADVERTISEMENT

ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ

ಕರವೇ ಐಟಿ ಘಟಕದ ಉಪಾಧ್ಯಕ್ಷ ಅರುಣ್ ಜಾವಗಲ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:36 IST
Last Updated 4 ಆಗಸ್ಟ್ 2019, 19:36 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ‘ಬೇರೆ ರಾಜ್ಯದ ಕಂಪನಿಗಳಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ರಾಜ್ಯದಲ್ಲಿ ಜಾಗ ಕೊಡುತ್ತಿದ್ದು, ಆ ಮೂಲಕ ಪರಿಸರ ಹಾಳಾಗುತ್ತಿದೆ. ಆದರೆ, ಅವರು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ’ ಎಂದು ಕರವೇ ಐಟಿ ಘಟಕದ ಉಪಾಧ್ಯಕ್ಷ ಅರುಣ್ ಜಾವಗಲ್ ಆರೋಪಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಗನೂರು ಬಸಪ್ಪ ಶಾಲೆಯಲ್ಲಿ ಭಾನುವಾರ ನಡೆದ ದಾವಣಗೆರೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ‘ಜ್ಞಾನಕಾಶಿ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ‘ಕನ್ನಡ–ಕನ್ನಡಿಗ ಉದ್ಯೋಗ’ ಕುರಿತು ಮಾತನಾಡಿದರು.

‘ಆಂಧ್ರಪ್ರದೇಶದಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲೂ ಇದು ಆಗಬೇಕು. ನಮಗೆ ಮೀಸಲಾತಿ ಬೇಡ. ಬದಲಾಗಿ ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ನಮ್ಮ ಹಕ್ಕು. ಜನಪ್ರತಿನಿಧಿಗಳು ಈ ಬಗ್ಗೆ ಯೋಚಿಸಬೇಕು. ಆದರೆ, ಅವರು ಈ ಕೆಲಸ ಮಾಡುತ್ತಿಲ್ಲ’ ಎಂದರು.

ADVERTISEMENT

‘ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಅದರಲ್ಲೂ ‘ಎ’ ಮತ್ತು ‘ಬಿ’ ದರ್ಜೆಯ ಉದ್ಯೋಗಗಳನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಸಂಕಷ್ಟ ಎದುರಾಗುತ್ತದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಜನಪ್ರತಿನಿಧಿಗಳು ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್ ‘ಕನ್ನಡದ ಬಗ್ಗೆ ಕೀಳರಿಮೆ ಬೇಡ. ವಿದ್ಯಾಭ್ಯಾಸದ ವೇಳೆ ಅಡೆತಡೆಗಳು ಬರುವುದು ಸಹಜ. ಆಗ ವಿದ್ಯಾರ್ಥಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು’ ಎಂದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ವಾಸುದೇವ ರಾಯ್ಕರ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಾಗನೂರು ಬಸ‍ಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರ ಗೌಡ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ. ಸತೀಶ್, ಪ್ರಾಂತೀಯ ಅಧ್ಯಕ್ಷ ಬೆಳ್ಳೂಡಿ ಶಿವಕುಮಾರ್‌, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಾರ್ಗೇಟ್ ಅಸ್ಲಾಂ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಕನ್ನಡಪರ ಹೋರಾಟಗಾರ ಖುದ್ದೂಸ್, ಸಿನಿಮಾ ಕೂಟದ ಕಾರ್ಯದರ್ಶಿ ವಿನಯ್‌
ಕುಮಾರ್, ಎಸ್‌.ಜಿ. ಉಳವಿ, ಶ್ರೀಕಾಂತ್‌ಭಟ್‌, ತಿಮ್ಮೇಶ್‌, ಶ್ರೀನಿವಾಸ್ ಚಿನ್ನಿಕಟ್ಟಿ, ಒ. ಮಹೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.