ದಾವಣಗೆರೆ: ನಗರ ಹೊರವಲಯದ ಲೋಕಿಕೆರೆ ರಸ್ತೆಯಲ್ಲಿರುವ ಎಸ್.ಎ.ರವೀಂದ್ರನಾಥ್ ನಗರದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಜೆಸಿಬಿಗಳು ಸದ್ದು ಮಾಡಿದವು. ತಹಶೀಲ್ದಾರ್ ಎಂ.ಬಿ.ಅಶ್ವಥ್ ನೇತೃತ್ವದಲ್ಲಿ ಅಧಿಕಾರಿಗಳು ‘ಅನಧಿಕೃತವಾಗಿ ನಿರ್ಮಿಸಿದ್ದ’ 36 ಮನೆಗಳನ್ನು ತೆರವುಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಕಳೆದ 15– 20 ವರ್ಷಗಳಿಂದ ಸಣ್ಣ ಸಣ್ಣ ಗೂಡಿನಂತಿರುವ ಶೆಡ್‌ಗಳಲ್ಲಿ 36 ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿದ್ದವು. ಅಧಿಕಾರಿಗಳು ಏಕಾಏಕಿ ಮುಂಜಾನೆಯೇ ಆಗಮಿಸಿ ಮನೆಗಳನ್ನು ತೆರವುಗೊಳಿಸಿದ್ದರಿಂದ ‘ನಾವು ಎಲ್ಲಿಗೆ ಹೋಗಬೇಕು, ಹೇಗೆ ಬದುಕು ಕಟ್ಟಿಕೊಳ್ಳಬೇಕು’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಶೆಡ್/ ಮನೆಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿದ್ದೇವೆ. 36 ಕುಟುಂಬಗಳಿಗೂ ಮಾನವೀಯ ದೃಷ್ಟಿಯಿಂದ ಬೇರೆಡೆ ನಿವೇಶನಕ್ಕೆ ಜಾಗ ಗುರುತಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.
ಜೆಸಿಬಿಗಳೊಂದಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ಏಕಾಏಕಿ ತೆರವುಗೊಳಿಸಿ ಅಂದರೆ ಹೇಗೆ ಎಂದು ಅಧಿಕಾರಿಗಳನ್ನು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದರು.
‘ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪೊಲೀಸರು ತಳ್ಳಾಟ, ನೂಕಾಟ ನಡೆಸಿ ಅಂಗಿ ಹರಿದರು, ದೌರ್ಜನ್ಯ ಎಸಗಿದರು’ ಎಂದು ಸ್ಥಳೀಯ ಮುಖಂಡ, ಪಾಲಿಕೆಯ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ದೂರಿದರು. ಸಂತ್ರಸ್ತರು ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಹಿಳೆಯೊಬ್ಬರು ಸುಸ್ತಾಗಿ ಕುಸಿದುಬಿದ್ದ ಘಟನೆಯೂ ನಡೆಯಿತು.
ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಸ.ನಂ.57 ಹಾಗೂ 67ರಲ್ಲಿ ಗೋಮಾಳ ಜಾಗದಲ್ಲಿ ಹಲವು ವರ್ಷಗಳಿಂದ ವಸತಿ ರಹಿತರು ಸಣ್ಣ ಸಣ್ಣ ಮನೆ, ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಕೂಲಿ ಕಾರ್ಮಿಕರೇ ಇಲ್ಲಿ ಹೆಚ್ಚಾಗಿ ಬದುಕು ಕಟ್ಟಿಕೊಂಡಿದ್ದರು.
ನೋಟಿಸ್‌ನಲ್ಲಿ ಏನಿದೆ?:
‘ಶಿರಮಗೊಂಡನಹಳ್ಳಿ ಗ್ರಾಮದ ಸ.ನಂ. 57 ಹಾಗೂ 67 ರಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆ/ ಶೆಡ್‌ಗಳನ್ನು ಸಿವಿಲ್ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಸೂಚಿಸಲಾಗಿದೆ. ಮನೆ ತೆರವುಗೊಳಿಸಿದರೆ ನಿವೇಶನ/ ಮನೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಲು ಕೋರಿದ್ದು, ಪರ್ಯಾಯ ವ್ಯವಸ್ಥೆ ಆಗುವವರೆಗೂ ಜಿಲ್ಲಾಡಳಿತ ರಕ್ಷಣೆ ನೀಡಿಲು ಮನವಿ ಮಾಡಿದ್ದೀರಿ. ಮನೆ ತೆರವುಗೊಳಿಸುವ ಸಂಬಂಧ ಈಗಾಗಲೇ ಸಿವಿಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದೀರಿ. ಯಾವುದೇ ಸಬೂಬು ಹೇಳದೇ ಮನೆ/ ಶೆಡ್‌ಗಳನ್ನು ತೆರವುಗೊಳಿಸಬೇಕು’ ಎಂದು ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
ಕೆಸರುಮಯ ಜಾಗ ತೋರಿಸಿದ್ದಾರೆ’
‘ನ್ಯಾಯಾಲಯದ ಆದೇಶ ಗೌರವಿಸಿಸುತ್ತೇವೆ. ಆದರೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಇಲ್ಲಿನ ನಿವಾಸಿಗಳು ಕೋರಿದ್ದರು. ಬಡ ಕಾರ್ಮಿಕರ ಮನವಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಇಲ್ಲಿ ತೆರವುಗೊಳಿಸಿದ ಬಳಿಕ ಸಂತ್ರಸ್ತರಿಗೆ ದೊಡ್ಡಬೂದಿಹಾಳ್ ಗ್ರಾಮದ ಬಳಿ ಜಾಗ ನೀಡುತ್ತೇವೆ ಎನ್ನುತ್ತಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕೆಸರುಮಯವಾದ ಜಾಗವನ್ನು ತೋರಿಸಿದ್ದಾರೆ’ ಎಂದು ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನಾ ಖಾನಂ ದೂರಿದರು. ‘ಕೊಳಚೆ ನೀರು ಹರಿಯುವ ಪ್ರದೇಶದಲ್ಲಿ ಅಧಿಕಾರಿಗಳು ನಿವೇಶನ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆ ಜಾಗವೂ ಎಲ್ಲ 36 ಕುಟುಂಬಗಳಿಗೆ ಆಗುವಷ್ಟು ಇಲ್ಲ’ ಎಂದು ಮುಖಂಡ ಆವರೆಗೆರೆ ಚಂದ್ರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.