ADVERTISEMENT

ಪಾಳುಬಿದ್ದ ಕಲ್ಕೆರೆ ಮಹಾಬಲೇಶ್ವರ ದೇವಸ್ಥಾನ- ಪುರಾತತ್ವ ಇಲಾಖೆಯ ನಿರ್ಲಕ್ಷ್ಯ

ಎಚ್.ವಿ.ನಟರಾಜ್
Published 12 ಜುಲೈ 2021, 4:39 IST
Last Updated 12 ಜುಲೈ 2021, 4:39 IST
ಚನ್ನಗಿರಿ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಇರುವ 801 ವರ್ಷಗಳ ಹಿಂದೆ ನಿರ್ಮಿಸಿರುವ ಮಹಾಬಲೇಶ್ವರ ದೇವರ ಮೂರ್ತಿ (ಎಡಚಿತ್ರ). ಪ್ರಾಚೀನ ಮಹಾಬಲೇಶ್ವರ ಸ್ವಾಮಿಯ ದೇವಸ್ಥಾನ.
ಚನ್ನಗಿರಿ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಇರುವ 801 ವರ್ಷಗಳ ಹಿಂದೆ ನಿರ್ಮಿಸಿರುವ ಮಹಾಬಲೇಶ್ವರ ದೇವರ ಮೂರ್ತಿ (ಎಡಚಿತ್ರ). ಪ್ರಾಚೀನ ಮಹಾಬಲೇಶ್ವರ ಸ್ವಾಮಿಯ ದೇವಸ್ಥಾನ.   

ಚನ್ನಗಿರಿ: ತಾಲ್ಲೂಕಿನ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಬರುವ ಕಲ್ಕೆರೆ ಗ್ರಾಮದ ಬಳಿ ಇರುವ 800 ವರ್ಷಗಳಷ್ಟು ಹಳೆಯದಾದ ಮಹಾಬಲೇಶ್ವರ ದೇವಸ್ಥಾನ ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದು, ಶಿಥಿಲಾವಸ್ಥೆ ತಲುಪಿದೆ.

ಹೊಯ್ಸಳರ ಸಾಮಂತ ರಾಜರಾದ ಅಸುಂದಿ ಗಂಗರ ಕಾಲದಲ್ಲಿ ಅಂದರೆ 1,224ನೇ ಸಾಲಿನಲ್ಲಿ ನಿರ್ಮಾಣ
ಗೊಂಡಿದೆ ಎಂಬ ಐತಿಹ್ಯವನ್ನು ಹೊಂದಿರುವ ಅತ್ಯಂತ ಪ್ರಾಚೀನವಾದ ಮಹಾಬಲೇಶ್ವರ ದೇವಸ್ಥಾನ ಮತ್ತೆ ಕಾಲಗರ್ಭದಲ್ಲಿ ಲೀನವಾಗುವ ಕಡೆಗೆ ದಾಪುಗಾಲನ್ನು ಇಟ್ಟಿದೆ.

ಹಾಗೆಯೇ ನಿಧಿಗಳ್ಳರ ನಿಧಿ ಆಸೆಗಾಗಿ ಈ ಸುಂದರವಾದ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ನಿಧಿಗಳ್ಳರು ಹಾಳು ಮಾಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ಈ ದೇವಸ್ಥಾನವಿದ್ದು, ಈ ಹೆದ್ದಾರಿಯಲ್ಲಿ ಹೋಗುವ ಪ್ರವಾಸಿಗರ ನೆಚ್ಚಿನ ಸ್ಥಳವೂ ಇದಾಗಿದೆ.

ADVERTISEMENT

ಸುಂದರ ಶಿಲ್ಪ ಕಲೆಯನ್ನು ಹೊಂದಿರುವ ದೇವಸ್ಥಾನದ ಕಲ್ಲುಗಳು ದಿನೇ ದಿನೇ ಒಂದೊದಾಗಿ ಬೀಳಲು ಆರಂಭಿಸಿವೆ. ಈ ದೇವಸ್ಥಾನದಿಂದ ಯಾವ ರೀತಿಯ ಆದಾಯವಿಲ್ಲದೇ ಇದ್ದರೂ ವಾರಕ್ಕೆ ಎರಡು ಬಾರಿ ಕಲ್ಕೆರೆ ಗ್ರಾಮದ ವಾಸಿಯಾದ ತೋಟಯ್ಯ ಎಂಬುವವರು ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಪ್ರಾಚೀನ ದೇವಸ್ಥಾನಗಳನ್ನು ಸಂರಕ್ಷಿಸುವುದು ಪುರಾತತ್ವ ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆ ಈ ದೇವಸ್ಥಾನದ ಸಂರಕ್ಷಣೆಯ ಬಗ್ಗೆ ತಕ್ಷಣ ಗಮನಹರಿಸಬೇಲು ಎನ್ನುತ್ತಾರೆ ಕಲ್ಕೆರೆ ಗ್ರಾಮದ ವಾಸಿ ಉಮೇಶ್.

ಸುಂದರ ಶಿಲ್ಪ ಕಲೆಯನ್ನು ಹೊಂದಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾಡಲು 2008ನೇ ಸಾಲಿನಲ್ಲಿಯೇ ₹ 94 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಈ ದೇವಸ್ಥಾನದ ಸುತ್ತಮುತ್ತ ಇರುವ 2 ಎಕರೆ ಪ್ರದೇಶದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಬೇಕಿದೆ. ಅನುದಾನ ಬಿಡುಗಡೆಗಾಗಿ ಮತ್ತೆ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.