ದಾವಣಗೆರೆ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಬೆಂಗಳೂರಿನ ವಸಂತನಗರದ ಮಾದರಿಯಲ್ಲಿಯೇ ಈ ಭವನವನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರವಾಸಿ ಮಂದಿರದ ಪಕ್ಕದಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್ ಭವನಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘2000ನೇ ಇಸವಿಯಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭವಾಗಿತ್ತು. ಸ್ಥಳದ ವಿಚಾರದಲ್ಲಿ ನಾಯಕರ ನಡುವೆ ಒಮ್ಮತ ಮೂಡಲಿಲ್ಲ. ಈ ಕಾರಣಕ್ಕೆ ಹಲವು ವರ್ಷಗಳಿಂದ ಇದು ನನೆಗುದಿಗೆ ಬಿದ್ದಿತು. ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ಗೆ ಮೀಸಲಾಗಿದ್ದ ಸ್ಥಳವನ್ನು ಭವನಕ್ಕೆ ಪಡೆಯಲಾಗಿದೆ. ₹ 20 ಕೋಟಿ ವೆಚ್ಚವಾದರೂ ಸರಿಯೇ. ಉತ್ತಮ ಭವನ ನಿರ್ಮಾಣವಾಗಬೇಕು’ ಎಂದರು.
‘ಭವನ ನಿರ್ಮಾಣಕ್ಕೆ ₹ 5 ಕೋಟಿ ಮೀಸಲಿಡಲಾಗಿದೆ. ₹ 1.5 ಕೋಟಿ ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ನಿವೇಶನ ಖರೀದಿಗೆ ಸರ್ಕಾರ ₹ 78 ಲಕ್ಷವನ್ನು ನೀಡಿದೆ. ಸೆಲ್ಲಾರ್ ಸೇರಿ ಸಕಲ ವ್ಯವಸ್ಥೆ ಇಲ್ಲಿರಬೇಕು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಕೂಡ ಚೆನ್ನಾಗಿರಬೇಕು. ಸಮೀಪದಲ್ಲಿಯೇ ಇರುವ ಜಿಲ್ಲಾ ಪಂಚಾಯಿತಿ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.
‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಹಾಸ್ಟೆಲ್ ವ್ಯವಸ್ಥೆಯಿಂದ ಯಾರೊಬ್ಬರೂ ವಂಚಿತರಾಗಬಾರದು. ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಅಭಿವೃದ್ಧಿ ಹೊಂದಬೇಕಿದೆ’ ಎಂದು ಹೇಳಿದರು.
‘ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಗೆ ಹೆಚ್ಚು ಅನುದಾನ ಸಿಕ್ಕಿತು. ಹಲವು ಹಾಸ್ಟೆಲ್‌ಗಳು ಆಗ ನಿರ್ಮಾಣವಾದವು. ಇಂತಹ ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆಗಳು ಕಾಣಿಸಿಕೊಂಡಿವೆ. ಈ ಕಟ್ಟಡಗಳು ಸುಣ್ಣ–ಬಣ್ಣಕ್ಕೆ ಕಾಯುತ್ತಿವೆ. ಈ ಕುರಿತು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಗಮನ ಸೆಳೆಯಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಕಾಂಗ್ರೆಸ್ ಮುಖಂಡ ಡಿ.ಬಸವರಾಜ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿ ನಾರಾಯಣ್, ಮುಖಂಡರಾದ ಹೆಗ್ಗೆರೆ ರಂಗಪ್ಪ, ಉಮೇಶ್, ಮಂಜುನಾಥ್, ದುಗ್ಗಪ್ಪ, ಟಾಟ ಶಿವು, ಮಲ್ಲೇಶಪ್ಪ, ಕುಂದವಾಡ ಮಂಜುನಾಥ್, ಆವರಗೆರೆ ಉಮೇಶ್ ಸೇರಿ ಇತರರೂ ಇದ್ದರು.
ಹೆದ್ದಾರಿ ಪಕ್ಕದ ಉತ್ತಮ ವಾತಾವರಣದಲ್ಲಿ ಭವನ ನಿರ್ಮಾಣ ಆಗುತ್ತಿರುವುದಕ್ಕೆ ಖುಷಿ ಇದೆ. ಮುಂದಿನ ವರ್ಷದ ಅಂಬೇಡ್ಕರ್ ಜಯಂತಿ ಇಲ್ಲಿ ಆಚರಿಸುವಂತೆ ಆಗಬೇಕುಕೆ.ಎಸ್.ಬಸವಂತಪ್ಪ ಶಾಸಕ ಮಾಯಕೊಂಡ
‘ಇಸ್ಪಿಟ್ ಅಡ್ಡೆಯಾದ ಭವನ’
ದಾವಣಗೆರೆ ರಿಂಗ್ ರಸ್ತೆಯಲ್ಲಿ ನಿರ್ಮಿಸಿದ ಬಾಬು ಜಗಜೀವನರಾಮ್ ಸಮುದಾಯ ಭವನ ಉಪಯೋಗಕ್ಕೆ ಬರುತ್ತಿಲ್ಲ. ಇತ್ತೀಚೆಗೆ ಇದು ಇಸ್ಪಿಟ್ ಅಡ್ಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. ‘ಸರ್ಕಾರದ ವತಿಯಿಂದ ನಿರ್ಮಿಸುವ ಭವನಗಳು ಸದುಪಯೋಗ ಆಗಬೇಕು. ಈ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯೊಂದನ್ನು ಸ್ಥಳಾಂತರಿಸಬೇಕು. ಆಗ ಹೆಚ್ಚು ನಿಗಾ ಇಡಲು ಸಾಧ್ಯವಾಗುತ್ತದೆ. ಬೇತೂರು ಗ್ರಾಮದ ಅಂಬೇಡ್ಕರ್ ಭವನಕ್ಕೂ ನಿರ್ವಹಣೆಯ ಸಮಸ್ಯೆ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.