ADVERTISEMENT

ಮಹಿಳೆಗೆ ಸುರಕ್ಷಿತ ರಾಜಕೀಯ ವೇದಿಕೆಗೆ ‘ಪ್ರಿಯದರ್ಶಿನಿ’: ಭವ್ಯ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 11:56 IST
Last Updated 10 ಡಿಸೆಂಬರ್ 2018, 11:56 IST
ಭವ್ಯ ನರಸಿಂಹಮೂರ್ತಿ
ಭವ್ಯ ನರಸಿಂಹಮೂರ್ತಿ   

ದಾವಣಗೆರೆ: ‘ಯುವತಿಯರಲ್ಲಿ ನಾಯಕತ್ವ ಗುಣ ಬೆಳೆಸಿ ಸುರಕ್ಷಿತ ರಾಜಕೀಯ ವೇದಿಕೆ ಕಲ್ಪಿಸಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಿಯದರ್ಶಿನಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ’ ಎಂದು ಪ್ರಿಯದರ್ಶಿನಿ ಕರ್ನಾಟಕ ಘಟಕದ ರಾಜ್ಯ ಸಂಚಾಲಕಿ ಭವ್ಯ ನರಸಿಂಹಮೂರ್ತಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ‘ಪ್ರಿಯದರ್ಶಿನಿ’ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ ಅವರು, ‘ದೇಶದ ಶಕ್ತಿಯಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೊದಲ ಹೆಸರಾದ ಪ್ರಿಯದರ್ಶಿನಿ ಹೆಸರಿನಲ್ಲಿ ಮಹಿಳೆಯರನ್ನು ಸಂಘಟಿಸಲು ಕಾರ್ಯಕ್ರಮ ರೂಪಿಸಲಾಗಿದೆ. 16ರಿಂದ 35 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಕಾಂಗ್ರೆಸ್‌ ಪಕ್ಷಕ್ಕೆ ತಂದು ಒಳ್ಳೆಯ ಸ್ಥಾನಮಾನ ಕೊಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಪ್ರಿಯದರ್ಶಿನಿ ಕಾರ್ಯಕ್ರಮವು ಮಹಿಳೆಯರ ಶಿಕ್ಷಣ, ಆರೋಗ್ಯ, ಸುರಕ್ಷತೆ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ. ಯುವತಿಯರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ತಾಯಿ ಆದಾಗ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಋತುಸ್ರಾವದಿಂದಾಗಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದೆ. ಉದ್ಯೋಗಕ್ಕೆ ಹೋದಾಗ ವೇತನ ತಾರತಮ್ಯ ಮಾಡಲಾಗುತ್ತಿದೆ’ ಎಂದು ಅವರು ಯುವತಿಯರ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ADVERTISEMENT

‘ದೇಶದಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ. 100 ಪ್ರಕರಣಗಳ ಪೈಕಿ 10 ಮಾತ್ರ ದಾಖಲಾಗುತ್ತಿವೆ. ಪ್ರತಿ ಒಂದು ಗಂಟೆಗೆ ಸರಾಸರಿ 39 ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗುತ್ತಿವೆ. ಸುರಕ್ಷತೆ ಇಲ್ಲದೇ ಇರುವುದರಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಹಾಗೂ ಕೆಲಸಕ್ಕೆ ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ. ಇಂಥ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಕಾಲೇಜುಗಳಿಗೆ ಹೋಗಿ ಮಹಿಳೆಯರಿಗೆ ಇರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಅವರು ವಿವರಿಸಿದರು.

ಪ್ರತಿ ಜಿಲ್ಲೆಯಲ್ಲಿ ‘ಪ್ರಿಯದರ್ಶಿನಿ’ಯಡಿ 800 ಯುವತಿಯರ ನೋಂದಣಿ ಮಾಡುವ ಗುರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಂಚಾಲಕಿ ಸುಶ್ಮಿತಾ ವಾಗೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.