ಸಾಸ್ವೆಹಳ್ಳಿ: ಹೋಬಳಿಯಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೈರನಹಳ್ಳಿ ಮತ್ತು ಕ್ಯಾಸಿನಕೆರೆ ನಡುವಿನ ಹಳ್ಳದಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದೆ. ಇದರಿಂದಾಗಿ 250ಕ್ಕೂ ಹೆಚ್ಚು ಎಕರೆ ಪ್ರದೇಶದ ಅಡಿಕೆ ತೋಟಗಳು ಜಲಾವೃತಗೊಂಡು ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಬೈರನಹಳ್ಳಿ ಕೆರೆಯು ಏತ ನೀರಾವರಿ ಯೋಜನೆಯಿಂದ ಈಗಾಗಲೇ ತುಂಬಿತ್ತು. ಇದರ ಬೆನ್ನಲ್ಲೇ ಸುರಿದ ಭಾರಿ ಮಳೆಯಿಂದಾಗಿ ಕೆರೆಯ ಹೆಚ್ಚುವರಿ ನೀರು ಮತ್ತು ಮಳೆ ನೀರು ಒಂದೇ ದಿನದಲ್ಲಿ ಹಳ್ಳಕ್ಕೆ ಧುಮ್ಮಿಕ್ಕಿ ಹರಿದು ಬಂದಿದೆ.
ಕ್ಯಾಸಿನಕೆರೆ ಸಮೀಪದ ನಿಲಗಲ್ ರಸ್ತೆ ಮತ್ತು ಬಾಳೆ ತೋಟಕ್ಕೆ ಹೋಗುವ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಈ ಎರಡು ರಸ್ತೆಗಳಲ್ಲಿ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಸೇತುವೆಗಳ ಮೇಲೆ ಗಂಟೆಗಟ್ಟಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಅಡಿಕೆ ಬೆಳೆಯು 3 ಮತ್ತು 4ನೇ ಕಟಾವು (ಕೊಯ್ಲು) ನಡೆಯುತ್ತಿರುವ ಸಮಯದಲ್ಲಿ ತೋಟಗಳಲ್ಲಿ ನೀರು ನಿಂತಿದೆ. ನೀರು ತಟದಲ್ಲಿ ನಿಲ್ಲದೆ ವಾರ ಗಟ್ಟಲೆ ಜಮೀನುಗಳಲ್ಲಿ ನಿಲ್ಲುವ ಸಾಧ್ಯತೆ ಇರುವುದರಿಂದ ಅಡಿಕೆ ತೋಟಗಾರಿಕೆಗೆ ಭಾರಿ ನಷ್ಟವಾಗುವ ಭೀತಿ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರೈತ ಬಸವರಾಜ್ ಎಂ ಸಿ, ‘ತೋಟಗಳಲ್ಲಿ ಅತಿಯಾಗಿ ನೀರು ನಿಂತಿರುವ ಕಾರಣ ಅಡಿಕೆ ಪಸಲು ಹಾಳಾಗಿ, ಜಳ್ಳು ಆಗುವ ಸಾಧ್ಯತೆ ಇದೆ. ಈ ವರ್ಷ ಅಡಿಕೆ ಫಸಲು ಸಂಪೂರ್ಣ ನಷ್ಟವಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.