
ದಾವಣಗೆರೆ: ಸಾರಿಗೆ ಸೇವೆಯಲ್ಲಿ ವ್ಯತ್ಯಯ, ಹಾಸ್ಟೆಲ್ ಅವ್ಯವಸ್ಥೆ, ಮದ್ಯ ಅಕ್ರಮ ಮಾರಾಟ, ಮೈಕ್ರೊ ಫೈನಾನ್ಸ್ ಕಿರುಕುಳ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಜೀವನಮಟ್ಟ ಸುಧಾರಿಸುವಂತೆ ಕೋರಿದರು.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಈ ಸಭೆಯಲ್ಲಿ ಪೊಲೀಸರಿಗಿಂತ ಇತರ ಇಲಾಖೆಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.
‘ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು ಕಡಿಮೆ ಇವೆ. ಬೇರೆ ಇಲಾಖೆಗಳ ಕುರಿತ ಸಮಸ್ಯೆಗಳ ಪಾಲು ಹೆಚ್ಚಿದೆ. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿರುವ ದೂರುಗಳನ್ನು ಪರಿಹರಿಸುತ್ತೇವೆ. ಇತರ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆಶ್ವಾಸನೆ ನೀಡಿದರು.
ಬಸ್ ಸೌಲಭ್ಯಕ್ಕೆ ಕೋರಿಕೆ: ಹರಿಹರ ತಾಲ್ಲೂಕಿನ ಕಡ್ಲೆಗುಂದಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿದರು. ಮನೆಗಳು ಬಿದ್ದು ಹೋಗಿದ್ದು, ಪುನರ್ ನಿರ್ಮಾಣಕ್ಕೆ ನೆರವು ನೀಡುವಂತೆ ಕೋರಿಕೊಂಡರು.
ದಾವಣಗೆರೆ ಹೊರವಲಯದ ಬೂದಾಳ್ ರಸ್ತೆಯಿಂದ ಸಾಕಷ್ಟು ಕಾರ್ಮಿಕರು ನಗರಕ್ಕೆ ಬರುತ್ತಾರೆ. ಈ ಕಾರ್ಮಿಕರ ಸಂಚಾರಕ್ಕೆ ಸಾರಿಗೆ ಸೌಲಭ್ಯವಿಲ್ಲ. ಗ್ರಾಮದಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ಅಂಗನವಾಡಿಯಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತು.
ಆಟೊಗಳ ಕಡಿವಾಣಕ್ಕೆ ಮನವಿ: ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಆಟೊಗಳ ಹಾವಳಿ ಹೆಚ್ಚಾಗಿದೆ. ಪ್ರತಿ ಆಟೊದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಎಲ್ಲೆಂದರಲ್ಲಿ ಆಟೊ ನಿಲುಗಡೆ ಮಾಡಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಆಟೊ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ನಗರದ ಶಾದಿಮಹಲ್ ರಸ್ತೆಯಲ್ಲಿ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕಬೇಕು. ಚರಂಡಿ ದುರಸ್ತಿ, ಬೀದಿದೀಪ ಅಳವಡಿಕೆ, ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದ ಸ್ವಚ್ಛತೆ ಕುರಿತು ಅಹವಾಲುಗಳು ಸಲ್ಲಿಕೆಯಾದವು. ಕುಂದೂರು ಗ್ರಾಮದಲ್ಲಿ ನಡೆಯುತ್ತಿರುವ ಮಣ್ಣು ಅಕ್ರಮ ಗಣಿಗಾರಿಕೆ, ಕಬ್ಬಳ ಗ್ರಾಮದ ಗ್ರಂಥಾಲಯದ ಸ್ಥಿತಿ ಹಾಗೂ ಕ್ಯಾಸನಕೆರೆ ಇಎಸ್‌ಐ ಆಸ್ಪತ್ರೆಯ ಸ್ಥಿತಿಗತಿಯ ಕುರಿತು ಆರೋಪಗಳು ಕೇಳಿಬಂದವು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತ ಹೊಸಗೌಡರ ಹಾಜರಿದ್ದರು.
‘ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಿ’ ‘
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಊಟ ಹಾಗೂ ಇತರ ಸೌಲಭ್ಯ ಮರೀಚಿಕೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಹರಿಹರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪಿ.ಜೆ. ಮಹಾಂತೇಶ್ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚಾಗಿದೆ. ಚಿಕ್ಕ ಅಂಗಡಿಗಳಲ್ಲಿ ಕೂಡ ಮದ್ಯ ಲಭ್ಯವಾಗುತ್ತಿದೆ. ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಮದ್ಯ ಸೇವನೆ ಮಾಡಲಾಗುತ್ತಿದೆ. ಮದ್ಯದ ಬಾಟಲಿಗಳನ್ನು ಒಡೆದು ಹಾಕಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.