ADVERTISEMENT

ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ: ಹಾಜರಾತಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 1:53 IST
Last Updated 23 ಫೆಬ್ರುವರಿ 2021, 1:53 IST
ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರು ಪಾಠ ಮುಗಿಸಿ ಖುಷಿಯಿಂದಲೇ ಹೊರಬಂದರು.  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರು ಪಾಠ ಮುಗಿಸಿ ಖುಷಿಯಿಂದಲೇ ಹೊರಬಂದರು.  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರು: ಸೋಮವಾರದಿಂದ 6ರಿಂದ 8ನೇ ತರಗತಿವರೆಗೆ ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಉತ್ತಮವಾಗಿದೆ.

ಈವೆರೆಗೆ ನಡೆದ ವಿದ್ಯಾಗಮ ಕಾರ್ಯಕ್ರಮಕ್ಕೆ ಸೀಮಿತ ಸಂಖ್ಯೆಯ ಮಕ್ಕಳು ಬರುತ್ತಿದ್ದರು. ಈಗ ಪೂರ್ಣಾವಧಿ ತರಗತಿಗಳು ಆರಂಭವಾಗಿರುವ ಕಾರಣ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 10ರಿಂದ 20ರಷ್ಟು ಏರಿಕೆಯಾಗಿದೆ.

ಮಕ್ಕಳಿಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲೆಗೆ ಬಿಡಲಾಯಿತು. ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ಮನೆಯಿಂದ ಊಟ, ಬಿಸಿನೀರು ತರುವಂತೆ ಮೊದಲೇ ಸೂಚಿಸಲಾಗಿತ್ತು. ಪಾಲಕರ ಒಪ್ಪಿಗೆ ಪತ್ರ ಪಡೆದು ಒಳಗೆ ಬಿಡಲಾಯಿತು.ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೂ ಕಾರ್ಯ ನಿರ್ವಹಿಸಿದವು.

ADVERTISEMENT

‘ವಿದ್ಯಾಗಮ ಇದ್ದಾಗ ಮಧ್ಯಾಹ್ನದವರೆಗೂ ತರಗತಿಗಳು ನಡೆಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಬಂದಿದ್ದಾರೆ. 8ನೇ ತರಗತಿಯಲ್ಲಿ ಶೇ 70ರಷ್ಟು ಹಾಜರಾತಿ ಇದೆ.ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ಹಿರಿಯ ಶಿಕ್ಷಕ ಮಹಾದೇವಪ್ಪ ತಿಳಿಸಿದರು.

‘ಹೆಚ್ಚಿನ ಸಮಯ ಸಿಕ್ಕಿರುವುದರಿಂದ ಕಷ್ಟಪಟ್ಟು ಓದಲು ಅನುಕೂಲವಾಗಿದೆ. ಮನೆಯಿಂದಲೇ ನೀರು ಹಾಗೂ ಊಟವನ್ನು ತರುತ್ತೇವೆ. ತರಗತಿಯಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುತ್ತೇವೆ’ ಎನ್ನುತ್ತಾನೆ ವಿದ್ಯಾರ್ಥಿ ಭರತ್.

ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳ‌ಲ್ಲಿ 6ರಿಂದ 10ನೇ ತರಗತಿವರೆಗೆ ಶೇ 74.47ರಷ್ಟು ಹಾಜರಾತಿ ಇದ್ದು, 6ನೇ ತರಗತಿಯ‌ಲ್ಲಿ ಶೇ 75, 7ನೇ ತರಗತಿಯಲ್ಲಿ ಶೇ 76.51, 8ನೇ ತರಗತಿಯಲ್ಲಿ 70.62ರಷ್ಟು ಹಾಜರಾತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.