ADVERTISEMENT

ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 3:09 IST
Last Updated 23 ಜನವರಿ 2026, 3:09 IST
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯಲ್ಲಿ ಗುರುವಾರ ಬೆಂಗಳೂರಿನ ಕಾರ್ಪೊರೇಟ್ ಸೋಸಿಯಲ್ ರೆಸ್ಪಾನ್ಸಿಬಲಿಟಿ ಫೌಂಡೇಷನ್ ವತಿಯಿಂದ 30 ಜನ ಹಾಲು ಉತ್ಪಾದಕರಿಗೆ ಪಶು ಆಹಾರ ಮತ್ತು ನುಗ್ಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯಲ್ಲಿ ಗುರುವಾರ ಬೆಂಗಳೂರಿನ ಕಾರ್ಪೊರೇಟ್ ಸೋಸಿಯಲ್ ರೆಸ್ಪಾನ್ಸಿಬಲಿಟಿ ಫೌಂಡೇಷನ್ ವತಿಯಿಂದ 30 ಜನ ಹಾಲು ಉತ್ಪಾದಕರಿಗೆ ಪಶು ಆಹಾರ ಮತ್ತು ನುಗ್ಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು   

ಬಸವಾಪಟ್ಟಣ: ಹಾಲು ಉತ್ಪಾದಕರು ವೈಜ್ಞಾನಿಕ ಪದ್ಧತಿಯಲ್ಲಿ ಹಸುಗಳ ಸಾಕಾಣಿಕೆ ಮಾಡುವುದರಿಂದ ಸಾಕುವುದರಿಂದ ಅತ್ಯಧಿಕ ಹಾಲು ಉತ್ಪಾದನೆ ಮಾಡಬಹುದು ಎಂದು ಬೆಂಗಳೂರಿನ ಕಾರ್ಪೊರೇಟ್‌ ಸೋಸಿಯಲ್‌ ರೆಸ್ಪಾನ್ಸಿಬಲಿಟಿ ಫೌಂಡೇಷನ್‌ ಸಂಸ್ಥೆಯ ಪಶು ವಿಜ್ಞಾನಿ ಜಿ. ಪ್ರೇಮಾ ಹೇಳಿದರು.

ಗುರುವಾರ ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಹಸು ಸಾಕಣಿಕೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹಾಲು ಉತ್ಪಾದಕರು ವೈಜ್ಞಾನಿಕ ರೀತಿಯಲ್ಲಿ ಕೊಟ್ಟಿಗೆಗಳ ನಿರ್ಮಾಣ, ಉತ್ತಮ ತಳಿಯ ಹಸುಗಳ ಸಾಕಾಣೆಯೊಂದಿಗೆ, ಹಸುಗಳಿಗೆ ಖನಿಜಾಂಶವಿರುವ ಆಹಾರವನ್ನು ನೀಡಬೇಕು. ರಾಜ್ಯದಲ್ಲಿ ಈಗ ಹೆಚ್ಚು ಹಾಲು ನೀಡುವ ಜರ್ಸಿ ಮತ್ತು ಎಚ್‌.ಎಫ್‌. ತಳಿಯ ಹಸುಗಳನ್ನು ಸಾಕಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ನಾಟಿ ಹಸುಗಳ ಸಾಕಣಿಕೆಯೂ ಸಾಕಷ್ಟಿದೆ. ಎರಡೂ ತಳಿಯ ಹಸುಗಳ ರಕ್ಷಣೆಯನ್ನು ಪಶು ವೈದ್ಯರ ಸಲಹೆಯ ಮೇರೆಗೆ ಮಾಡಿದಲ್ಲಿ ಅಧಿಕ ಹಾಲು ಉತ್ಪಾದನೆ ಸಾಧ್ಯ ಎಂದು ಪ್ರೇಮಾ ಹೇಳಿದರು.

ADVERTISEMENT

ಗ್ರಾಮದಲ್ಲಿ ನಾಟಿ ಹಾಗೂ ಮಿಶ್ರತಳಿಯ 1500 ಹಸುಗಳಿದ್ದು, 4500 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿದಿನ ಹಸು ಸಾಕಾಣಿಕೆದಾರರು ಹಸಿಮೇವಿನೊಂದಿಗೆ ಸಾವಯವ ಪಶು ಆಹಾರವನ್ನು ನೀಡುತ್ತಿರುವುದರಿಂದ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಸರ್ಕಾರ ಹಸು ಸಾಕಾಣೆಗೆ ನೀಡುತ್ತಿರುವ ಸೌಲಭ್ಯವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಪ್ರಗತಿಪರ ರೈತ ರವೀಂದ್ರನಾಥ್‌ ದಾಗಿನಕಟ್ಟೆ ತಿಳಿಸಿದರು.

ಬೆಂಗಳೂರಿನ ಸಂಸ್ಥೆ ವತಿಯಿಂದ 30 ಜನ ಹಾಲು ಉತ್ಪಾದಕರಿಗೆ ಉಚಿತವಾಗಿ ಮಿನರಲ್ಸ್‌ಯುಕ್ತ ಪಶು ಆಹಾರ ಮತ್ತು ತಲಾ ಐದು ನುಗ್ಗೆ ಸಸಿಗಳನ್ನು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.