ADVERTISEMENT

23 ರಂದು ಷಹಾಜಿ ರಾಜೆ ಬೋಸ್ಲೆ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 13:45 IST
Last Updated 20 ಜನವರಿ 2020, 13:45 IST

ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಬೋಸ್ಲೆಯವರ 356ನೇ ಪುಣ್ಯಾರಾಧನಾ ಸಮಾರಂಭ ಜ. 23ರಂದು ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆಯಲಿದೆ ಎಂದು ಶ್ರೀ ಷಹಾಜಿ ರಾಜೆ ಭೋಂಸ್ಲೆಯವರ ಸ್ಮಾರಕ ಮತ್ತು ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ವೈ. ಮಲ್ಲೇಶ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷದಂತೆ ಷಹಾಜಿ ರಾಜೆ ಬೋಸ್ಲೆಯವರ ಪುಣ್ಯಾರಾಧನೆಯನ್ನು ಹೊದಿಗೆರೆಯಲ್ಲಿ ನಡೆಸಲಾಗುತ್ತಿದ್ದು, ಷಹಾಜಿ ರಾಜೆ ಬೋಸ್ಲೆಯವರ ವಂಶಸ್ಥ ಶಿವಾಜಿರಾಜ ಟಿ. ಬೋಸ್ಲೆ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ’ ಎಂದು ಹೇಳಿದರು.

‘23ರಂದು ಬೆಳಿಗ್ಗೆ 11ಕ್ಕೆ ನಡೆಯುವ ಪುಣ್ಯಾರಾಧನಾ ಸಮಾರಂಭದಲ್ಲಿ ಬೆಂಗಳೂರಿನ ಭವಾನಿ ಪೀಠದ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಶಾಸಕ ಮಾಡಾಳ್ ವಿರುಪಾಕ್ಷಪ್ಪ, ವಿಧಾನ ಪರಿಷತ್ತು ಸದಸ್ಯರಾದ ಆಯನೂರು ಮಂಜುನಾಥ್, ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಾರುತಿರಾವ್ ಮೊಳೆ, ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಯಶವಂತ ರಾವ್ ಜಾಧವ್ ಭಾಗವಹಿಸುವರು’ ಎಂದು ತಿಳಿಸಿದರು.

ADVERTISEMENT

ಪ್ರವರ್ಗ-3 ‘ಬಿ’ಯಲ್ಲಿರುವ ಕ್ಷತ್ರೀಯ ಮರಾಠ ಸಮಾಜವನ್ನು ಪ್ರವರ್ಗ-2 ‘ಎ’ಗೆ ಸೇರಿಸಬೇಕು ಎನ್ನುವುದು ಸಮಾಜದ ಬಹಳ ಹಳೆಯ ಬೇಡಿಕೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಮಾಜದ ಬೇಡಿಕೆ ಈಡೇರಿಸುವ ಬಗ್ಗೆ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅನೇಕ ಕಾರಣಗಳಿಂದ ಸಾಧ್ಯವಾಗಿಲ್ಲ. ಕೂಡಲೇ ಪ್ರವರ್ಗ-3 ‘ಬಿ’ಯಲ್ಲಿರುವ ಕ್ಷತ್ರೀಯ ಮರಾಠ ಸಮಾಜವನ್ನು ಪ್ರವರ್ಗ-2 ‘ಎ’ ಗೆ ಸೇರಿಸಬೇಕು ಮತ್ತು ಶಿವಾಜಿ ಕ್ಷತ್ರೀಯ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಎಂದು ಸಮಾರಂಭದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು’ ಎಂದು ತಿಳಿಸಿದರು.

ಕ್ಷತ್ರೀಯ ಮರಾಠ ಸಮಾಜದ ಮುಖಂಡ ಅಜ್ಜಪ್ಪ ಪವಾರ್ ಮಾತನಾಡಿ, ‘ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮೀಪದ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿ 9 ವರ್ಷಗಳ ಹಿನ್ನೆಲೆಯಲ್ಲಿ ಜ.21ರಂದು ಮಂಗಳವಾರ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಲಾಗುವುದು’ ಎಂದು ತಿಳಿಸಿದರು.

ಕ್ಷತ್ರೀಯ ಮರಾಠ ಸಮಾಜದ ಹನುಮಂತರಾವ್ ಸಾಳಂಕಿ, ಸತ್ಯನಾರಾಯಣರಾವ್, ಮಂಜುನಾಥ್, ವೆಂಕಟೇಶ್ ಕಾಟೆ, ಮಂಜುನಾಥ್ ಗಾಯಕ್ವಾಡ್, ಬಸವರಾಜ್ ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.