
ದಾವಣಗೆರೆ: ಚನ್ನಗಿರಿ ತಾಲ್ಲೂಕಿನಲ್ಲಿರುವ ಶಾಂತಿಸಾಗರ (ಸೂಳೆಕೆರೆ)ವು ಜಿಲ್ಲೆಯ ಜನರ ನೆಚ್ಚಿನ ಪ್ರವಾಸಿ ತಾಣ. ಹಸಿರಿನ ವಾತಾವರಣದಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಈ ಐತಿಹಾಸಿಕ ಕೆರೆಯು, ಜೀವನದಲ್ಲಿ ಜುಗುಪ್ಸೆ ಹೊಂದಿದವರು ಸುಲಭದಲ್ಲೇ ಜೀವನಕ್ಕೆ ಅಂತ್ಯಹಾಡಲು (ಆತ್ಮಹತ್ಯೆ ಮಾಡಿಕೊಳ್ಳುವ) ಆಯ್ಕೆ ಮಾಡಿಕೊಳ್ಳುವ ನೆಚ್ಚಿನ ತಾಣವೂ ಹೌದು.
‘ಜೀವನದಲ್ಲಿ ಯಾವುದೇ ಭರವಸೆಯೂ ಇಲ್ಲ’ ಎಂದು ಭಾವಿಸಿ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬರುವವರನ್ನು ಆ ಕ್ಷಣಕ್ಕೆ ತಡೆದು ಮನಃ ಪರಿವರ್ತನೆ ಮಾಡುವುದು, ‘ಬೀಸುವ ದೊಣ್ಣೆ’ ತಪ್ಪಿಸಿದಂತೆಯೇ.
ಈ ಕೆರೆಯ ಸುತ್ತಮುತ್ತ ಭದ್ರತೆಯ ಕೆಲಸಕ್ಕೆಂದೇ ಪ್ರವಾಸೋದ್ಯಮ ಇಲಾಖೆಯಿಂದ ‘ಪ್ರವಾಸಿಮಿತ್ರ’ ಹುದ್ದೆಗೆ ನೇಮಕಗೊಂಡಿರುವ ದಾವಣಗೆರೆ ಘಟಕದ ಗೃಹರಕ್ಷಕ, ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ ಗ್ರಾಮದ ಪುನೀತ್ ಡಿ.ಎಸ್ ಅವರು ನವೆಂಬರ್ ಮೊದಲ ವಾರದ ನಾಲ್ಕು ದಿನಗಳ ಅವಧಿಯಲ್ಲಿ ಮೂವರ ಜೀವರಕ್ಷಣೆ ಮಾಡಿ, ‘ಬೀಸುವ ದೊಣ್ಣೆ’ ತಪ್ಪಿಸಿ ಮಾದರಿಯಾಗಿದ್ದಾರೆ.
ನವೆಂಬರ್ 4ರಂದು ಮಧ್ಯಾಹ್ನ ಚನ್ನಗಿರಿ ಪಟ್ಟಣದ 22 ವರ್ಷ ವಯಸ್ಸಿನ ಯುವತಿಯೊಬ್ಬರು ಜೀವವನ್ನೇ ತೊರೆಯಲೆಂದು ಬಸ್ಸಿಂದ ಇಳಿದು, ಸೂಳೆಕೆರೆಯ ಸಿದ್ದನ ತೂಬಿನ ಬಳಿ ಅನುಮಾನಾಸ್ಪದವಾಗಿ ನಿಂತಿದ್ದನ್ನು ಕಂಡು ಪುನೀತ್ ಸ್ಥಳಕ್ಕೆ ಹೋಗಿದ್ದಾರೆ. ತನ್ನನ್ನು ನೋಡುತ್ತಿದ್ದಂತೆಯೇ ಯುವತಿ ಕೆರೆಗೆ ಜಿಗಿದಾಗ ತಾವೂ ಜೀವವನ್ನೇ ಪಣಕ್ಕಿಟ್ಟು ಯುವತಿಯ ದುಪ್ಪಟ್ಟಾ ಹಿಡಿದೆಳೆದು ರಕ್ಷಿಸಿದ್ದಾರೆ. ಕೂಡಲೇ 112 ನಂಬರ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿ ಸಂಬಂಧಿಗಳನ್ನು ಕರೆಸಿ ತಿಳಿಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ನವೆಂಬರ್ 7ರಂದು ಕೆರೆ ಹತ್ತಿರವಿರುವ ಸಿದ್ದೇಶ್ವರ ದೇವಸ್ಥಾನದ ಬಳಿ ಬಸ್ ಇಳಿದು ಬಂದ ಮಹಿಳೆಯೊಬ್ಬರು 7 ವರ್ಷ ವಯಸ್ಸಿನ ಮಗುವಿನೊಂದಿಗೆ ಓಡಿ ಹೋಗಿ ಕೆರೆಗೆ ಹಾರಲು ಯತ್ನಿಸುತ್ತಿದ್ದುದನ್ನು ಕಂಡು ಹತ್ತಿರ ಹೋದ ಪುನೀತ್, ಜೀವ ಕಳೆದುಕೊಳ್ಳದಂತೆ ತಿಳಿ ಹೇಳಿ ದಡದಿಂದ ಈಚೆ ಕರೆತಂದು ಸಮಯಪ್ರಜ್ಞೆ ಪ್ರದರ್ಶಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅವರ ಜೀವ ಉಳಿದಿದೆ. ಕೌಟುಂಬಿಕ ಕಲಹದಿಂದಾಗಿ ಬೇಸತ್ತಿದ್ದ ಮಹಿಳೆ ಮತ್ತು ಅವರ ಚಿಕ್ಕಮಗುವಿನ ಪ್ರಾಣ ಈ ಮೂಲಕ ಉಳಿದಿದೆ.
2012–13ರಲ್ಲಿ ಗೃಹರಕ್ಷಕ ಸೇವೆಗೆ ನೇಮಕಗೊಂಡಿರುವ ಪುನೀತ್, 2016ರಿಂದ ಸೂಳೆಕೆರೆ ಭದ್ರತೆಗಾಗಿ ‘ಪ್ರವಾಸಿಮಿತ್ರ’ನಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬಂಟಿಯಾಗಿ ಬಂದು ಕೆರೆಗೆ ಹಾರಲು ಮುಂದಾಗಿದ್ದ ಏಳೆಂಟು ಜನರನ್ನು ಇವರು ರಕ್ಷಿಸಿದ್ದಾರೆ. ಅನುಮಾನಾಸ್ಪದವಾಗಿ ಕೆರೆಯ ಹತ್ತಿರ ಸುಳಿದಾಡುತ್ತಿದ್ದ 25ರಿಂದ 30 ಜನರಿಗೆ ತಿಳಿಹೇಳಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿರುವ ಇವರ ಸೇವೆ ಇತರರಿಗೆ ಮಾದರಿಯಾಗಿದೆ.
ಕಾಲುವೆ ಮೂಲಕ ಹರಿದು ಬರುವ ಹತ್ತಾರು ಶವಗಳನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಇವರು, ನಿತ್ಯ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಪ್ರವಾಸಿ ತಾಣವಾದ ಸೂಳೆಕೆರೆಯ ಭದ್ರತೆಯ ಕೆಲಸದಲ್ಲಿ ತೊಡಗುತ್ತಾರೆ. ಜೀವರಕ್ಷಣೆಯಲ್ಲಿ ಪೊಲೀಸರ ಪಾತ್ರವೂ ಮುಖ್ಯವಾದದ್ದು ಎಂದು ಸ್ಮರಿಸುತ್ತಾರೆ.
‘ಸೂಳೆಕೆರೆಯ ಬಳಿ ಎರಡು ವರ್ಷಗಳ ಹಿಂದೆ ಇದ್ದ ಪೊಲೀಸ್ ಚೌಕಿಯನ್ನು ರಸ್ತೆ ಅಗಲೀಕರಣದ ಕಾರಣ ನೆಲಸಮ ಮಾಡಲಾಗಿದೆ. ಅಲ್ಲಿಂದ ಈವರೆಗೆ ಇಲ್ಲಿ ಪೊಲೀಸ್ ಸಿಬ್ಬಂದಿಯೇ ಇಲ್ಲ. ಸರ್ಕಾರ ಪೊಲೀಸ್ ಚೌಕಿಯನ್ನು ಪುನಃ ಆರಂಭಿಸಿದಲ್ಲಿ ಆತ್ಮಹತ್ಯೆಗೆ ಬರುವವರಿಗೆ ಭಯ ಇರುತ್ತದೆ. ಪ್ರವಾಸಿಗರಿಗೆ ಇನ್ನಷ್ಟು ಭದ್ರತೆಯೂ ಲಭ್ಯವಾಗಲಿದೆ’ ಎಂದು ಐಟಿಐವರೆಗೆ ಓದಿರುವ 35 ವರ್ಷ ವಯಸ್ಸಿನ ಪುನೀತ್ ಕೋರುತ್ತಾರೆ.
ಭದ್ರತೆಯ ಸೇವೆಯಲ್ಲಿದ್ದಾಗ ಕೆಲವರ ಪ್ರಾಣ ರಕ್ಷಣೆ ಮಾಡಿದ ಹೋಂ ಗಾರ್ಡ್ ಪುನೀತ್ ಅವರ ಸೇವೆ ಅನುಕರಣೀಯಸುಜಿತ್ ಕುಮಾರ್ ಎಸ್.ಎಚ್. ಕಮಾಂಡೆಂಟ್ ಗೃಹರಕ್ಷಕದಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.