ADVERTISEMENT

ಶಿವಶಂಕರಪ್ಪರ ದಾನ, ಧರ್ಮ ಅವಿಸ್ಮರಣೀಯ

ಸಂತ್ಸಂಗ ಕಾರ್ಯಕ್ರಮದಲ್ಲಿ ಯೋಗಾನಂದ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:58 IST
Last Updated 21 ಡಿಸೆಂಬರ್ 2025, 6:58 IST
ಕಡರನಾಯ್ಕನಹಳ್ಳಿ ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಅಮಾವಾಸ್ಯೆ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ನಡೆಯಿತು
ಕಡರನಾಯ್ಕನಹಳ್ಳಿ ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಅಮಾವಾಸ್ಯೆ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ನಡೆಯಿತು   

ಕಡರನಾಯ್ಕನಹಳ್ಳಿ: ‘ಮನುಷ್ಯ ಶ್ರೀಮಂತರಾದರೆ ಸ್ಮರಣೀಯ ಅಲ್ಲ. ಶಾಮನೂರು ಶಿವಶಂಕರಪ್ಪ ಅವರ ದಾನ– ಧರ್ಮ ಅವಿಸ್ಮರಣೀಯ ಮತ್ತು ಮಾದರಿ’ ಎಂದು ಗುರುಸಿದ್ಧಾಶ್ರಮದ ಯೋಗಾನಂದ ಶ್ರೀ ಹೇಳಿದರು.

ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಶುಕ್ರವಾರ ಎಳ್ಳಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹಣ, ಆಸ್ತಿ ಶಾಶ್ವತವಲ್ಲ. ದಾನ, ಧರ್ಮದಿಂದ ಮನುಷ್ಯ ಜೀವಂತಿಕೆಯನ್ನು ಪಡೆದು ಕೀರ್ತಿವಂತನಾಗುತ್ತಾನೆ. ಸಿದ್ಧಾರೂಢರದು ಅದ್ವೈತ ಸಿದ್ಧಾಂತ. ಜಾತಿ– ಮತ ಪಂಥಗಳಿಲ್ಲದ ಒಟ್ಟಿಗೆ ಸೇರಿ ಸುವಿಚಾರ ಸವಿಯುವುದೇ ಸತ್ಸಂಗ’ ಎಂದು ತಿಳಿಸಿದರು.

ADVERTISEMENT

‘ಮನುಷ್ಯ ತನ್ನೆಲ್ಲ ಬೇಡಿಕೆ ಈಡೇರಿದರೂ ಆಕಾಂಕ್ಷಿಯೇ ಆಗಿರುತ್ತಾನೆ. ನೆಮ್ಮದಿಗಾಗಿ ಇರುವ ಮಾರ್ಗವೇ ಅಧ್ಯಾತ್ಮ. ತಾನೂ ಬದುಕಿ ಇತರರನ್ನೂ ಬದುಕಲು ಸಹಕರಿಸುವುದು, ಮಾನವೀಯ ಪ್ರಪಂಚವನ್ನು ಸೃಜಿಸುವುದು ಸತ್ಸಂಗದಿಂದ ಮಾತ್ರ ಸಾಧ್ಯ. ಹಿಂದೆ ಋಷಿ– ಮುನಿಗಳು ಅಭಯಾರಣ್ಯಗಳಲ್ಲಿ ತಪಸ್ಸು ಮಾಡಿ ಲೋಕ ಕಲ್ಯಾಣದ ಆಶಯ ಹೊಂದಿದ್ದರು’ ಎಂದು ಅಧ್ಯತ್ಮ ಚಿಂತಕ ಡಿ. ಸಿದ್ದೇಶ್ ಮಾತನಾಡಿದರು.

‘ಮನುಷ್ಯನಿಗೆ ವಿವೇಕ ಮತ್ತು ವೈರಾಗ್ಯ ಇವೆರಡೂ ಮಹತ್ವ ಪಡೆಯುತ್ತವೆ. ಒಳಿತಿಗೆ ವಿವೇಕ ಬೇಕು. ಅತಿಯಾದ ವ್ಯಾಮೋಹ, ದುರಾಸೆ ಕಡಿವಾಣಕ್ಕೆ ವೈರಾಗ್ಯ ಬೇಕಾಗುತ್ತದೆ. ಸಂಸ್ಕಾರ, ಸಂಸ್ಕೃತಿಯನ್ನು ಇಂತಹ ಸತ್ಸಂಗದಿಂದ ಪಡೆಯಲು ಸಾಧ್ಯ’ ಎಂದು ಗುರುದ್ಯಾನ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಎಂ.ಕೆ. ಸ್ವಾಮಿ ಹೇಳಿದರು.

ಕುಂಬಳೂರು ಹನುಮಂತಪ್ಪ, ಪಿಎಸಿಎಸ್ ಮುಖ್ಯ ಕಾರ್ಯನಿರ್ವಾಹಕ ಶೇಖರ್ ಮಾತನಾಡಿದರು.

ಸತ್ಸಂಗದಲ್ಲಿ ಶಾಮನೂರು ಶಿವಶಂಕರಪ್ಪ ಇವರಿಗೆ ಸಂತಾಪ ಸೂಚಿಸಲಾಯಿತು. ಕುಂಬಳೂರು ಕುಬೇರಪ್ಪ ಸಿದ್ಧಾರೂಢರ ಸಾಹಿತ್ಯ ವಾಚಿಸಿದರು. ಎಳ್ಳಮಾವಾಸ್ಯೆ ಸತ್ಸಂಗ ನಿಮಿತ್ತ ಕರ್ತೃ ಗದ್ದಿಗೆಗೆ ಅಭಿಷೇಕ ಮತ್ತು ವಿಶೇಷ ಪೂಜೆ, ಪೂಜಾಲಂಕಾರ ಮಾಡಲಾಗಿತ್ತು.

ನಂತರ ಶ್ರೀಗಳ ಕಿರೀಟ ಪೂಜೆ ವಿಜೃಂಭಣೆಯಿಂದ ನಡೆಯಿತು. ಯಲವಟ್ಟಿ, ಜಿಗಳಿ, ಕುಂಬಳೂರು ಭಜನಾ ತಂಡಗಳು ಭಾಗವಹಿಸಿದ್ದವು. ಹೊಸಮನಿ ಮಲ್ಲಪ್ಪ ಮತ್ತು ಕುಟುಂಬದವರು ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಜಿಗಳಿ ಆನಂದಪ್ಪ, ಕುಂಬಳೂರು ವಾಸು, ನಿವೃತ್ತ ಯೋಧ ಶಿವಕುಮಾರ್, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.