ADVERTISEMENT

ಜೀವಂತ ದೇವರುಗಳಿಗೆ ಪ್ರಸಾದ ನೀಡುತ್ತಿದ್ದ ಸಿದ್ಧಗಂಗಾಶ್ರೀ: ತೋಂಟದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 15:44 IST
Last Updated 21 ಜನವರಿ 2019, 15:44 IST
ದಾವಣಗೆರೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ದಾವಣಗೆರೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ದಾವಣಗೆರೆ: ಲಿಂಗದ ಮುಖ ಜಂಗಮ ಎಂದು ಪ್ರಸಾದ ಕೇಂದ್ರಗಳನ್ನು ಸ್ಥಾಪಿಸಿ 10 ಸಾವಿರ ಜೀವಂತ ದೇವರುಗಳಿಗೆ ಪ್ರಸಾದ ನೀಡುತ್ತಾ ಬಂದವರು ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.

ವಿಶ್ವಧರ್ಮ ಪ್ರವಚನ ಸಮಿತಿ ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸೋಮವಾರ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಮೈಸೂರಿನ ಸುತ್ತೂರು ಮಠ, ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗ, ಸಿರಿಗೆರೆ, ಗದಗ, ಕೊಪ್ಪಳ, ಧಾರವಾಡ ಹೀಗೆ ನಾನಾ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಪ್ರಸಾದ ಕೇಂದ್ರಗಳನ್ನು ತೆರೆದು, ಆಶ್ರಯ ನೀಡಿ ಶಿಕ್ಷಣ ಹಂಚಿದ್ದರು. ಹಾಗಾಗಿ ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ಭಿನ್ನವಾಗಿ ನಿಲ್ಲುವಂತಾಯಿತು ಎಂದರು.

ADVERTISEMENT

ಕರ್ನಾಟಕದಲ್ಲಿ ಬ್ರಾಹ್ಮಣರ ಮಠ ಮತ್ತು ಲಿಂಗಾಯತರ ಮಠಗಳು ಎಂದು ಎರಡು ತರಹದ ಮಠಗಳಿವೆ. ಬ್ರಾಹ್ಮಣರ ಮಠಗಳಲ್ಲಿ ಅವರೇ ಇದ್ದು ವಿದ್ಯೆ ಕಲಿತರೆ, ಲಿಂಗಾಯತರ ಮಠಗಳಲ್ಲಿ ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರಿಗೂ ಓದಲು ಅವಕಾಶಗಳು ಸಿಕ್ಕಿದವು. ಲಿಂಗಾಯತರು ಸಾಮಾಜಿಕವಾಗಿ ಗಟ್ಟಿಯಾಗಿದ್ದರು. ಆದರೆ ಧಾರ್ಮಿಕವಾಗಿ ಮಡಿವಂತಿಕೆ ಮತ್ತಿತರ ಸಂಪ್ರದಾಯಗಳಿಗೆ ಜೋತುಬಿದ್ದು ಹಿಂದೆ ಉಳಿದರು. ಈ ಮಡಿವಂತಿಕೆಯನ್ನು ತಿದ್ದಿಕೊಂಡು ಮುಂದೆ ಸಾಗಬೇಕಿದೆ. ಅದಕ್ಕೆ ಸಿದ್ದಗಂಗಾ ಸ್ವಾಮೀಜಿ ನಮಗೆ ಮಾರ್ಗದರ್ಶಕರಾಗಿರಬೇಕು ಎಂದು ಹೇಳಿದರು.

ಸಿದ್ಧಗಂಗಾ ಶ್ರೀಗಳು ಧಾರ್ಮಿಕ ಗುರುಗಳು ಎಂಬ ಕಾರಣಕ್ಕೆ, ಶತಾಯುಷಿ ಎಂಬ ಕಾರಣಕ್ಕೆ ಭಾರತರತ್ನ ಸಿಗಬೇಕು ಎನ್ನುತ್ತಿಲ್ಲ. ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಾಡಿದ ಸಾಧನೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ಧಗಂಗಾ ಶ್ರೀಗಳು ಆ ಕಾಲಕ್ಕೆ ಇಂಗ್ಲಿಷ್‌ನಲ್ಲಿ ಬಿ.ಎ. ಮಾಡಿದವರು. ತಾನು ಕಲಿತ ವಿದ್ಯೆಯನ್ನು ಸಮಾಜಕ್ಕೆ ನೀಡಲು ಮುಂದಾದರು. ಕುದುರೆ ಏರಿಕೊಂಡು ಹೋಗಿ ರಾಗಿ ಭಿಕ್ಷೆ ತಂದು ಪ್ರಸಾದವಾಗಿ ಮಕ್ಕಳಿಗೆ ನೀಡಿ, ಅವರೂ ಸೇವಿಸಿ ವಿದ್ಯಾವಂತ ಸಮಾಜವನ್ನು ಕಟ್ಟಿದರು ಎಂದು ನೆನಪಿಸಿಕೊಂಡರು.

ಜಾಗತಿಕ ಲಿಂಗಾಯತ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌, ಚಿನ್ಮಯಾನಂದ ಸ್ವಾಮೀಜಿ, ಶಿವನಕೆರೆ ಬಸವಲಿಂಗಪ್ಪ, ಶಂಭುಲಿಂಗಪ್ಪ, ಅಜ್ಜಂಪುರ ಶೆಟ್ರು, ಎಂ.ಜಿ. ಪುಟ್ಟಸ್ವಾಮಿ, ನಾಗಬಸಪ್ಪ ಎಲೆಬೇತೂರು, ಚಂದ್ರಶೇಖರ್‌, ರುದ್ರಮುನಿ ಆವರಗೆರೆ, ಶಶಿಧರ ಬಸಾಪುರ, ಬಾಡದ ಆನಂದರಾಜ್‌, ಡಾ. ಪ್ರಕಾಶ್‌ ಹಿರೇಮಠ, ಮಹಾಂತೇಶ್‌ ಅಗಡಿ, ಷಡಕ್ಷರಿ ಅವರೂ ಇದ್ದರು.

ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಎಲ್ಲರೂ ಕ್ಯಾಂಡಲ್‌ ಹಚ್ಚಿ ಸಂತಾಪ ಸೂಚಿಸಿದರು.

‘ಉತ್ತರ್‌ಮೇ ಗಂಗಾ ದಕ್ಷಿಣ್‌ಮೇ ಸಿದ್ಧಗಂಗಾ’

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಕರ್ನಾಟಕಕ್ಕೆ ಬಂದಿದ್ದರು. ಅವರು ‘ಉತ್ತರ್‌ ಮೇ ಗಂಗಾ ದಕ್ಷಿಣ್‌ ಮೇ ಸಿದ್ಧಗಂಗಾ’ ಎಂದು ಸಿದ್ಧಗಂಗಾ ಶ್ರೀಗಳನ್ನು ಬಣ್ಣಿಸಿದ್ದರು ಎಂದು ನಿಜಗುಣ ಪ್ರಭು ಸ್ವಾಮೀಜಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.