ಜಗಳೂರು: ದೇಶದಲ್ಲಿ ಅಸಂಖ್ಯಾತ ಪ್ರತಿಭಾವಂತ ಎಂಜಿನಿಯರ್ ಹಾಗೂ ವೈದ್ಯರು ರೂಪುಗೊಳ್ಳುತ್ತಿದ್ದಾರೆ. ಆದರೆ, ಪ್ರತಿಭಾ ಪಲಾಯನದಿಂದ ವಿದೇಶಗಳಿಗೆ ಲಾಭವಾಗುತ್ತಿರುವುದು ವಿಪರ್ಯಾಸ ಎಂದು ಉಜ್ಜಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಬುಧವಾರ ಬಸವೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯಲ್ಲಿ ಭಾರತದ 5,693 ಜನ ಎಂಜಿನಿಯರ್‌ಗಳು ಇದ್ದಾರೆ. ಆದರೆ, ಪ್ರತಿಭಾವಂತರು ನಮ್ಮ ದೇಶಕ್ಕೆ ಲಾಭವಾಗುತ್ತಿಲ್ಲ. ಅವರಿಗೆ ದೇಶದ ಇಸ್ರೊ ಸಂಸ್ಥೆಯ ಮೇಲೆ ಪ್ರೀತಿ ಮೂಡಬೇಕು. ಗ್ರಾಮೀಣ ಭಾಗದಲ್ಲಿ ದೇಗುಲ ಮತ್ತು ಶಿಕ್ಷಣ ಎರಡೂ ಅವಶ್ಯ. ದೇವಸ್ಥಾನಗಳು ಜಾತಿ ವ್ಯವಸ್ಥೆಯನ್ನು ನಾಶಪಡಿಸಿ ಏಕತೆ ಸಾರಬೇಕು’ ಎಂದು ಹೇಳಿದರು.
‘ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕುಂಠಿತವಾಗಿಲ್ಲ. ಶಾಸಕನಾಗಿ ಎರಡೇ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ₹ 600 ಕೋಟಿ ಅನುದಾನ ತಂದಿದ್ದೇನೆ. ರೈತರ ನೀರಾವರಿಗೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ತಾಲ್ಲೂಕಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಗೌರಿಪುರ, ಅಣಬೂರು ಗ್ರಾಮದಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪಿಸಲಾಗುತ್ತಿದೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಶಿಲ್ಪಿಗಳಾದ ಅರುಣ ಯೋಗಿರಾಜ್, ರಾಘವ್ ನಾಯಕ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಜಿ.ಬಿ.ವಿನಯ್ ಕುಮಾರ್, ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಪಿ.ಪಾಲಯ್ಯ, ಎಚ್. ನಾಗರಾಜ್, ಎಸ್.ಕೆ.ಮಂಜುನಾಥ್, ವೀರಶೈವ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಅಜ್ಜಯ್ಯ ನಾಡಿಗೇರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಪರಮೇಶ್, ಮುಖಂಡರಾದ ತಿಪ್ಪೇಸ್ವಾಮಿ, ಮುರುಗೇಶ್ ಆರಾಧ್ಯ, ಪಲ್ಲಾಗಟ್ಟೆ ಮಹೇಶ್ ಇನ್ನಿತರರಿದ್ದರು.
‘ಕೆರೆ ತುಂಬಿಸುವ ಯೋಜನೆ ಜಾರಿಯಿಂದ ಬರದನಾಡು ಅಡಿಕೆ ನಾಡಾಗಿ ಪರಿವರ್ತನೆಗೊಂಡಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಅನುದಾನ ಕುಂಠಿತವಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಅನುದಾನ ಬಂದಿತ್ತು’ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.