ADVERTISEMENT

ಅಂತರರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ

ವ್ಯಾಪಾರಿಯಿಂದ ಲೂಟಿ ಮಾಡಿದ್ದ ₹ 58 ಲಕ್ಷ ಮೌಲ್ಯದ ಬೆಳ್ಳಿ ವಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 11:10 IST
Last Updated 12 ಜನವರಿ 2019, 11:10 IST
ಕೊಲ್ಲಾಪುರದ ಬೆಳ್ಳಿ ವ್ಯಾಪಾರಿ ಜಗನ್ನಾಥ ಖಂಡೇಕರ್‌ ಅವರನ್ನು ದರೋಡೆ ಮಾಡಿದ್ದ ಆರೋಪಿಗಳಿಂದ ದಾವಣಗೆರೆ ಗ್ರಾಮೀಣ ಠಾಣೆಯ ಪೊಲೀಸರು ಬೆಳ್ಳಿ ಹಾಗೂ ಕಾರನ್ನು ವಶಪಡಿಸಿಕೊಂಡಿರುವುದು.
ಕೊಲ್ಲಾಪುರದ ಬೆಳ್ಳಿ ವ್ಯಾಪಾರಿ ಜಗನ್ನಾಥ ಖಂಡೇಕರ್‌ ಅವರನ್ನು ದರೋಡೆ ಮಾಡಿದ್ದ ಆರೋಪಿಗಳಿಂದ ದಾವಣಗೆರೆ ಗ್ರಾಮೀಣ ಠಾಣೆಯ ಪೊಲೀಸರು ಬೆಳ್ಳಿ ಹಾಗೂ ಕಾರನ್ನು ವಶಪಡಿಸಿಕೊಂಡಿರುವುದು.   

ದಾವಣಗೆರೆ: ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೆಂಬರ್‌ 29ರಂದು ರಾತ್ರಿ ಮಹಾರಾಷ್ಟ್ರದ ಕೊಲ್ಲಾಪುರದ ಬೆಳ್ಳಿ ವ್ಯಾಪಾರಿ ಜಗನ್ನಾಥ ಖಂಡೇಕರ್‌ ಅವರ ಕಾರು ತಡೆದು 282 ಕೆ.ಜಿ. ಬೆಳ್ಳಿಯನ್ನು ದರೋಡೆ ಮಾಡಿದ್ದ ಪ್ರಕರಣವನ್ನು 15 ದಿನಗಳಲ್ಲಿ ಭೇದಿಸಿರುವ ಗ್ರಾಮೀಣ ಠಾಣೆ ಪೊಲೀಸರು, ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ₹ 58 ಲಕ್ಷ ಮೌಲ್ಯದ ಬೆಳ್ಳಿ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರು ಹಾಗೂ ಪಿಸ್ತೂಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಜಗನ್ನಾಥ ಖಂಡೇಕರ್‌ ಅವರು ಚಾಲಕ ಪಾಂಡುರಂಗ ಮಾಲಿ ಜೊತೆಗೆ 282 ಕೆ.ಜಿ. ಕಚ್ಚಾ, ಪಕ್ಕಾ ಬೆಳ್ಳಿಯನ್ನು ಕೊಲ್ಲಾಪುರದಿಂದ ಚೆನ್ನೈಗೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಡಿ. 29ರಂದು ಬೆಳಗಿನ ಜಾವ 3 ಗಂಟೆಗೆ ಫಾರ್ಚುನರ್‌ ಕಾರಿನಲ್ಲಿ ಬಂದಿದ್ದ ಆರೋಪಿಗಳು ಜಗನ್ನಾಥ ಅವರ ಕಾರನ್ನು ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದರು. ಪಿಸ್ತೂಲ್‌ ತೋರಿಸಿ ಜಗನ್ನಾಥ ಹಾಗೂ ಪಾಂಡುರಂಗ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಚಿತ್ರದುರ್ಗದ ಕಡೆಗೆ ಹೋಗಿದ್ದರು. ಜಗನ್ನಾಥ ಅವರ ಕಾರನ್ನು ಉಳಿದ ಆರೋಪಿಗಳು ತೆಗೆದುಕೊಂಡು ಹೋಗಿ, ಮಧ್ಯದಲ್ಲಿ ಬೆಳ್ಳಿಯನ್ನು ತಮ್ಮ ಕಾರಿಗೆ ಹಾಕಿಕೊಂಡಿದ್ದರು. ನಂತರ ಆ ಕಾರನ್ನು ಬೆಳಗಿನ ಜಾಗ 5.30ರ ಹೊತ್ತಿಗೆ ಚಿತ್ರದುರ್ಗದ ಬಳಿ ತಂದು ಜಗನ್ನಾಥ ಅವರಿಗೆ ನೀಡಿ ಪರಾರಿಯಾಗಿದ್ದರು. ಆರೋಪಿಗಳು ಬೆಳ್ಳಿಯ ಜೊತೆಗೆ ₹ 14,200 ನಗದು, ಎಟಿಎಂ ಕಾರ್ಡ್‌, ಮೊಬೈಲ್‌ ಅನ್ನೂ ಕಿತ್ತುಕೊಂಡು ಹೋಗಿದ್ದರು. ಪ್ರಕರಣ ಭೇದಿಸಲು ಎರಡು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ಮುಖ್ಯ ಆರೋಪಿಗಳಾದ ಮಹಾರಾಷ್ಟ್ರದ ಇಚಲಕರಂಜಿಯ ನಿಸಾರ್‌ (44) ಹಾಗೂ ಕೊಲ್ಲಾಪುರದ ಉಪರಿ ಗ್ರಾಮದ ರಾಹುಲ್‌ (36)ನನ್ನು ಜನವರಿ 5ರಂದು ಬಂಧಿಸಲಾಗಿತ್ತು’ ಎಂದು ತಿಳಿಸಿದರು.

ಬೆಳ್ಳಿಯನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಾಗ ನಿಸಾರ್‌ ಹಾಗೂ ರಾಹುಲ್‌ ಅವರು ನಿರ್ಜನ ಪ್ರದೇಶದಲ್ಲಿ ಜಗನ್ನಾಥ ಅವರ ಕಾರನ್ನು ತಡೆದು ಬೆಳ್ಳಿಯನ್ನು ದರೋಡೆ ಮಾಡಲು ಸಂಚು ರೂಪಿಸಿದ್ದಾರೆ. ತಮ್ಮ ಜೊತೆಗೆ ಇಚಲಕರಂಜಿಯ ನದೀಮ್‌ (25) ಹಾಗೂ ಉಪರಿ ಗ್ರಾಮದ ಜಾಕೀರ್‌ ಸಾಬ್‌ (20)ನನ್ನು ಫೋಕ್ಸ್‌ವ್ಯಾಗನ್‌ ಕಾರಿನಲ್ಲಿ ಕೊಲ್ಲಾಪುರದಿಂದ ಹಿಂಬಾಲಿಸಿಕೊಂಡು ಬರುತ್ತಿದ್ದರು. ಈ ನಡುವೆ ದರೋಡೆ ಸಂಚಿನ ವಿಚಾರವನ್ನು ಬಳ್ಳಾರಿಯ ರಾಮಯ್ಯ ಕಾಲೊನಿಯ ನಾಗರಾಜ ಅಲಿಯಾಸ್ ಬಳ್ಳಾರಿ ನಾಗಾ ಜೊತೆ ಹಂಚಿಕೊಂಡಿದ್ದಾರೆ. ದಾವಣಗೆರೆ ಮತ್ತು ಚಿತ್ರದುರ್ಗ ನಡುವೆ ದರೋಡೆ ನಡೆಸಲು ತೀರ್ಮಾನಿಸಿದ್ದಾರೆ. ನಾಗರಾಜ ತನ್ನ ಸಹಚರರಾದ ಶ್ಯಾಮ್‌ಸುಂದರ್‌ (46), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣ ದುರ್ಗದ ಮನೋಹರ್‌ (45), ಕರ್ನೂಲ್‌ ಜಿಲ್ಲೆಯ ಉದಯ್‌ಕುಮಾರ್‌ (36) ಜೊತೆಗೆ ಫಾರ್ಚುನರ್‌ ಕಾರಿನಲ್ಲಿ ಬಂದಿದ್ದಾರೆ. ಎರಡೂ ತಂಡಗಳು ಹೆಬ್ಬಾಳದ ಟೋಲ್‌ ಗೇಟ್‌ ದಾಟಿದ ಬಳಿಕ ಜಗನ್ನಾಥ ಅವರ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು ಎಂಬುದನ್ನು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಚೇತನ್‌ ತಿಳಿಸಿದರು.

ADVERTISEMENT

‘ನಿಸಾರ್‌ ಹಾಗೂ ಬಳ್ಳಾರಿಯ ನಾಗರಾಜ್‌ ಹಳೆಯ ವಾಹನಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಪರಿಚಯ ಬೆಳೆದಿತ್ತು. ಜಗನ್ನಾಥ ಅವರನ್ನು ಕಾರಿನಲ್ಲಿ ಸುತ್ತಾಡಿಸಿದ ಮಾರ್ಗ, ಆರೋಪಿಗಳ ಚಹರೆಯ ಸ್ಕೆಚ್‌ ಹಾಗೂ ಇನ್ನಿತರ ತಾಂತ್ರಿಕ ಆಧಾರದ ಮೇಲೆ ಮೊದಲು ಮುಖ್ಯ ಆರೋಪಿಗಳನ್ನು ಬಂಧಿಸಲಾಯಿತು. ಅವರಿಂದ ಇನ್ನಷ್ಟು ಮಾಹಿತಿ ಕಲೆ ಹಾಕಿ ಉಳಿದ ಆರು ಆರೋಪಿಗಳನ್ನು ಹಾಗೂ ದರೋಡೆ ಮಾಡಿದ್ದ ಬೆಳ್ಳಿ ಮತ್ತು ಒಂದು ಫಾರ್ಚೂನರ್‌ ಹಾಗೂ ಒಂದು ಫೋಕ್ಸ್‌ವ್ಯಾಗನ್‌ ಕಾರನ್ನು ವಶಕ್ಕೆ ಪಡೆದಿದ್ದೇವೆ. ಇನ್ನೂ ಕೆಲ ಪ್ರಮಾಣದ ಬೆಳ್ಳಿಯನ್ನು ಮಾರಾಟ ಮಾಡಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

ದಾವಣಗೆರೆ ಗ್ರಾಮೀಣ ಸಿಪಿಐ ಗುರುಬಸವರಾಜ್‌, ಪಿಎಸ್‌ಐ ಕಿರಣ್‌ಕುಮಾರ್‌, ಹದಡಿ ಠಾಣೆಯ ಪಿಎಸ್‌ಐ ರಾಜೇಂದ್ರನಾಯ್ಕ್‌, ಸಿಬ್ಬಂದಿ ಬಾಲರಾಜ್‌, ಮಹೇಶ, ವೆಂಕಟೇಶ್‌, ಹಾಲೇಶ್‌, ಮಂಜಪ್ಪ, ಮಂಜುನಾಥ, ಕೆ. ಪ್ರಕಾಶ್‌, ನರೇಂದ್ರಮೂರ್ತಿ, ಮರುತಿ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್‌, ಎಂ.ಪಿ. ರಮೇಶ್‌, ಸಹಾಯಕರಾದ ಅಣ್ಣಪ್ಪ, ಶ್ರೀನಿವಾಸ್‌ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ನಡೆದ 15 ದಿನಗಳಲ್ಲೇ ಭೇದಿಸಿರುವ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಬಳ್ಳಾರಿಯ ನಾಗರಾಜ್‌ ಹಾಗೂ ಸಹಚರರ ಬಗ್ಗೆ ಈ ಹಿಂದೆ ಎಲ್ಲಿಯೂ ಪ್ರಕರಣ ದಾಖಲಾಗಿರಲಿಲ್ಲ. ಹೊರ ರಾಜ್ಯದ ಆರೋಪಿಗಳ ಬೆರಳಚ್ಚು ಕಳುಹಿಸಿಕೊಡಲಾಗುತ್ತಿದ್ದು, ಇನ್ನೂ ಮತ್ತೆ ಎಲ್ಲಾದರೂ ದರೋಡೆ ನಡೆಸಿದ್ದರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾಲ್ವರು ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಪಡೆದು ಇನ್ನಷ್ಟು ವಿಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಉಪ ವಿಭಾಗದ ಡಿ.ವೈ.ಎಸ್‌.ಪಿ. ಮಂಜುನಾಥ ಗಂಗಲ್‌, ಗ್ರಾಮೀಣ ಸಿಪಿಐ ಗುರುಬಸವರಾಜ್‌, ಪಿಎಸ್‌ಐ ಕಿರಣ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.