ADVERTISEMENT

ದಾವಣಗೆರೆ: ಇಂದಿನಿಂದ ದಸರಾ, ಎಲ್ಲೆಡೆ ಸರಳ ಆಚರಣೆ

ದೇವಾಲಯಗಳಲ್ಲಿ ದೇವಿಗೆ ಅಲಂಕಾರ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 15:22 IST
Last Updated 16 ಅಕ್ಟೋಬರ್ 2020, 15:22 IST
ನವರಾತ್ರಿ ಹಬ್ಬದ ಅಂಗವಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಜನರು ಹಣ್ಣು, ಹೂವು ಖರೀದಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ನವರಾತ್ರಿ ಹಬ್ಬದ ಅಂಗವಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಜನರು ಹಣ್ಣು, ಹೂವು ಖರೀದಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೊರೊನಾ ಕಾರಣ ಈ ಬಾರಿ ನಗರದಲ್ಲಿ ನವರಾತ್ರಿ ಸಡಗರ ಇಲ್ಲ. ಎಲ್ಲೆಡೆ ಸರಳ ಆಚರಣೆ ಇರಲಿದೆ. ದಸರಾ ಅಂಗವಾಗಿ ಸಂಪ್ರದಾಯದಂತೆ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಶನಿವಾರದಿಂದ ದಸರಾ ಆರಂಭವಾಗಲಿದ್ದು, ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 6 ಕ್ಕೆ ಘಟ ಸ್ಥಾಪನೆಯೊಂದಿಗೆ ನವರಾತ್ರಿಗೆ ಚಾಲನೆ ಸಿಗಲಿದೆ.

ಹಬ್ಬಕ್ಕೆ ಕೊರೊನಾ ಮಂಕು ಕವಿದಿರುವ ಕಾರಣ ಮನೆಗಳಲ್ಲಿ ದಸರಾ ಗೊಂಬೆಕೂರಿಸುವ ಸಂಪ್ರದಾಯಕ್ಕೆ ಈ ಬಾರಿ ಬ್ರೇಕ್‌ ಬಿದ್ದಿದೆ. ಕೆಲವರು ಆಚರಣೆ ಬಿಡಬಾರದು ಎಂದು ಸಾಂಕೇತಿಕವಾಗಿ ಗೊಂಬೆ ಕೂರಿಸಲು ನಿರ್ಧರಿಸಿದ್ದು, ಮನೆಯವರೇ ಸೇರಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ದೇವಾಲಯಗಳಲ್ಲೂ ಸರಳ ಆಚರಣೆ ಇರಲಿದ್ದು, ಅಲಂಕಾರ ಪೂಜೆ ನಡೆಯಲಿದೆ.

ನವರಾತ್ರಿ ಅಂಗವಾಗಿ ಮಾರುಕಟ್ಟೆಯಲ್ಲಿ ಶುಕ್ರವಾರ ಜನರು ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿಸುತ್ತಿದ್ದುದು ಕಂಡುಬಂತು. ಹಳೆ ಬಸ್‌ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಗಡಿಯಾರದ ಕಂಬ ಸೇರಿ ನಗರ ಪ್ರಮುಖ ಸ್ಥಳಗಳಲ್ಲಿ ಹೂವು, ಹಣ್ಣಿನ ಮಾರಾಟ ಇತ್ತು. ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇರಲಿಲ್ಲ. ಚೆಂಡು, ಸೇವಂತಿ, ಮಲ್ಲಿಗೆ ಹೂವಿನ ಖರೀದಿ ಭರಾಟೆ ಕಂಡಿತು. ಹಣ್ಣು, ತರಕಾರಿಗಳ ದರ ಹೆಚ್ಚಿದ್ದ ಕಾರಣ ಜನರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ನವರಾತ್ರಿ ಆರಂಭವಾಗುತ್ತಿರುವುದರಿಂದ ಪೂಜೆಗೆ ಎಷ್ಟು ಬೇಕೊ ಅಷ್ಟೇ ಸಾಮಗ್ರಿಗಳನ್ನು ಜನರು ಖರೀದಿಸಿದರು.

ADVERTISEMENT

ಬಹುತೇಕ ತರಕಾರಿ ದರ ಕೆ.ಜಿ.ಗೆ ₹ 60 ರಿಂದ ₹ 80 ಇದ್ದ ಕಾರಣ ಗ್ರಾಹಕರು ಗೊಣಗಿಕೊಂಡೇ ಖರೀದಿ ಮಾಡಿದರು. ಚೆಂಡು ಹೂವು–₹ 20, ಸೇವಂತಿ–₹ 25, ಮಲ್ಲಿಗೆ, ಕನಕಾಂಬರ–₹ 50 ಇತ್ತು. ಸೇಬು ಹಣ್ಣು– ₹ 100 (ಕೆ.ಜಿಗೆ), ಮೋಸಂಬಿ, ಸ‍ಪೋಟ–₹ 60, ಕಿತ್ತಳೆ ₹ 40 ಇತ್ತು.

‘ಕೊರೊನಾ ಕಣಪ್ಪ ಸ್ವಲ್ಪ ಕಮ್ಮಿ ಮಾಡು ಎಂದು ಗ್ರಾಹಕರು ಹೇಳಿದರೆ, ಕೊರೊನಾ ನಮಗೂ ಕಷ್ಟ ತಂದಿದೆ. ಕಡಿಮೆ ಇಲ್ಲ’ ಎಂದು ವ್ಯಾಪಾರಿಗಳು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.

‘ಪ್ರತಿ ವರ್ಷ ದಸರಾಗೆ ಗೊಂಬೆ ಕೂರಿಸುತ್ತಿದ್ದೆ, ವಿವಿಧೆಡೆಯಿಂದ ಗೊಂಬೆ ಹುಡುಕಿ ತಂದು ವಿಭಿನ್ನವಾಗಿ ಅಲಂಕಾರ ಮಾಡುತ್ತಿದ್ದೆ. ಈ ಬಾರಿ ಕೊರೊನಾ ಕಾರಣ ಗೊಂಬೆ ಕೂರಿಸುತ್ತಿಲ್ಲ. ಮನೆಯವರೇ ಸೇರಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ’ ಎಂದು ದಸರಾ ಗೊಂಬೆ ಕೂರಿಸುತ್ತಿದ್ದ ವಿನೋಬನಗರದ ಚಂದ್ರಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಾಲಯಗಳಲ್ಲಿ ಸಿದ್ಧತೆ:

ನಗರ ದೇವತೆ ದುರ್ಗಾಂಬಿಕಾ, ನಿಟುವಳ್ಳಿ ದುರ್ಗಾಂಬಿಕಾ, ಕರಿಯಮ್ಮ ದೇವಸ್ಥಾನ, ರಾಜೇಂದ್ರ ಬಡಾವಣೆಯ ಬನಶಂಕರಿ, ವಿನೋಬನಗರದ ಜೌಡೇಶ್ವರಿ, ಕಾಳಿಕಾದೇವಿ ದೇವಾಲಯ, ಹಳೆ ದಾವಣಗೆರೆಯ ನಿಮಿಷಾಂಬ, ತುಳಜಾಭವಾನಿ, ಕನ್ನಿಕಾ ಪರಮೇಶ್ವರಿ,ರಿಂಗ್‌ ರಸ್ತೆಯ ಶಾರದಾಂಬ ದೇವಾಲಯ ಸೇರಿ ನಗರದ ವಿವಿಧ ದೇವಿಯರ ದೇವಾಲಯಗಳಲ್ಲಿ ನವರಾತ್ರಿ ಸಿದ್ಧತೆ ನಡೆಯಿತು.

ಎಲ್ಲ ದೇವಾಲಯಗಳಲ್ಲಿ ಸರಳ ಆಚರಣೆ ನಡೆಯಲಿದ್ದು, ದೇವಿಗೆ ಅಲಂಕಾರ ಪೂಜೆ ಇರಲಿದೆ. ಭಕ್ತರು ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ನಗರ ದೇವತೆ ದೇವಾಲಯದಲ್ಲಿ ಸಿದ್ಧತೆ

ನಗರ ದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ನವರಾತ್ರಿ ಆಚರಣೆಗೆ ವಿವಿಧ ಸಿದ್ಧತೆ ಕೈಗೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 6ಕ್ಕೆ ದೀಪಾರಾಧನೆ, ಘಟ ಸ್ಥಾಪನೆಯೊಂದಿಗೆ ಹಬ್ಬಕ್ಕೆ ಚಾಲನೆ ಸಿಗಲಿದೆ.

ದೇವಾಲಯದ ಅಧ್ಯಕ್ಷ , ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಕುಟುಂಬದವರು, ದೇವಾಲಯದ ಎಲ್ಲ ಧರ್ಮದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೊರೊನಾ ಕಾರಣ ಸರಳ ಆಚರಣೆ ಇರಲಿದೆ. ದೇವಿಗೆ ಪ್ರತಿದಿನ ‌ಅಲಂಕಾರ ಪೂಜೆ, ವಿಶೇಷ ಪೂಜೆಗಳು, ಇತರೆ ಆಚರಣೆ ನಡೆಯಲಿವೆ ಎಂದುದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ ಗೌಡ್ರು ಚನ್ನಬಸಪ್ಪ ತಿಳಿಸಿದರು.

ದೇವಿಗೆ ವಿವಿಧ ಅಲಂಕಾರ ಪೂಜೆ:

ನವರಾತ್ರಿ ಅಂಗವಾಗಿಅ.17ರಂದು ದೇವಿಗೆ ಮೋಹಿನಿ ಅಲಂಕಾರ, 18ರಂದು ಗರುಡ ವಾಹನ, 19ರಂದು ಗಜವಾಹನ, 20ರಂದು ವೀಣಾವಾಹನ, 21ರಂದು ಸರಸ್ವತಿ, 22ರಂದು ಹಂಸವಾಹನ, 23ರಂದು ವೃಷಭ ವಾಹನ, 24ರಂದು ದುರ್ಗಾಷ್ಟಮಿ ಪ್ರಯುಕ್ತ ನವದುರ್ಗೆ ಅಲಂಕಾರ ನಡೆಯಲಿದೆ. 25ರಂದು ಆಯುಧ ಪೂಜೆ ಹಾಗೂ ಮೋಹಿನಿ ಅಲಂಕಾರ, 26ರಂದು ವಿಜಯದಶಮಿ ಕಾರ್ಯಕ್ರಮ, ಬನ್ನಿ ಮುಡಿಯುವುದು, ಗಜಲಕ್ಷ್ಮೀ ಅಲಂಕಾರ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.