ದಾವಣಗೆರೆ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬಳಿಕವೂ ಪ್ಲಾಸ್ಟಿಕ್ ಬಳಸಿದರೆ ದಂಡ ಅಥವಾ ಉದ್ದಿಮೆ ರಹದಾರಿಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪರಿಸರ ಸಂರಕ್ಷಣೆ ಮತ್ತು ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಹೋಟೆಲ್, ಕಲ್ಯಾಣ ಮಂಟಪ, ಬಟ್ಟೆ ಅಂಗಡಿ, ಕ್ಯಾಟರಿಂಗ್ ಹಾಗೂ ಆಸ್ಪತ್ರೆಯ ಮಾಲೀಕರಿಗೆ ಮನವರಿಕೆ ಮಾಡಿಕೊಡುವ ಸಭೆಯಲ್ಲಿ ಅವರು ಮಾತನಾಡಿದರು.
‘ಏಕ ಬಳಕೆ ಪ್ಲಾಸ್ಟಿಕ್ ಮಾರಾಟ, ಉತ್ಪಾದನೆಗೆ ನಿಷೇಧವಿದೆ. ಆದರೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಏಕಬಳಕೆ ಪ್ಲಾಸ್ಟಿಕ್ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಬೇಕಾಗಿದೆ. ಪಾಲಿಕೆ ಕಸ ಸಂಗ್ರಹ ವಾಹನಗಳು ಬಂದಾಗ ನಾಗರಿಕರು ಹಸಿ-ಕಸ ಮತ್ತು ಒಣಕಸವನ್ನು ವಿಂಗಡಿಸಿ ನೀಡಬೇಕು’ ಎಂದು ಹೇಳಿದರು.
‘ಕಲ್ಯಾಣ ಮಂಟಪದಲ್ಲಿ ಉತ್ಪತ್ತಿಯಾಗುವ ಕಸವದಲ್ಲಿ ಪ್ಲಾಸ್ಟಿಕ್ ಪ್ರತ್ಯೇಕಿಸಿ ನೀಡಬೇಕು. ಬಾಳೆ ಎಲೆಯನ್ನು ಪ್ಲಾಸ್ಟಿಕ್‍ನಲ್ಲಿ ಕೊಡಬಾರದು. ಬಟ್ಟೆ ಅಂಗಡಿಯಲ್ಲಿ ಬಟ್ಟೆ ಬ್ಯಾಗ್‍ಗಳನ್ನು ಬಳಕೆಯನ್ನು ಪ್ರೋತ್ಸಾಹಿಸಬೇಕು’ ಎಂದು ಸೂಚನೆ ನೀಡಿದರು.
‘ಸಿದ್ಧ ಆಹಾರ ಪೂರೈಕೆದಾರರು ಸಹ ಏಕ ಬಳಕೆಯ ಪ್ಲಾಸ್ಟಿಕ್‍ನ್ನು ಉಪಯೋಗಿಸಬಾರದು. ಪ್ಲಾಸ್ಟಿಕ್‍ನಲ್ಲಿ ಆಹಾರವನ್ನು ಪ್ಯಾಕಿಂಗ್ ಮಾಡಬಾರದು. ಕ್ಲಿನಿಕ್ ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ವೈದ್ಯಕೀಯ ತ್ಯಾಜ್ಯವನ್ನು ಪಾಲಿಕೆ ಕಸದ ಗಾಡಿಗಳಿಗೆ ನೀಡಬಾರದು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.