ADVERTISEMENT

ಆರೋಗ್ಯಕರ ಜೀವನಕ್ಕೆ ನಿದ್ದೆಯೂ ಅಗತ್ಯ: ಡಿವೈಎಸ್‌ಪಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:09 IST
Last Updated 9 ನವೆಂಬರ್ 2025, 6:09 IST
   

ದಾವಣಗೆರೆ: ನಿದ್ದೆಯ ಕೊರತೆಯ ಕಾರಣಕ್ಕೆ ದೇಹದ ಆಕಾರ ಬದಲಾಗುತ್ತದೆ. ಆರೋಗ್ಯಕರ ಜೀವನಕ್ಕೆ ನಿದ್ದೆ ಅತಿ ಅಗತ್ಯ ಎಂದು ಗ್ರಾಮಾಂತರ ವಿಭಾಗದ ಡಿವೈಎಸ್‌ಪಿ ಬಿ.ಎಸ್. ಬಸವರಾಜ ಅಭಿಪ್ರಾಯಪಟ್ಟರು.

ಇಲ್ಲಿನ ದೇವರಾಜ ಅರಸು ಬಡಾವಣೆಯ ಜಿಲ್ಲಾ ಸಮಾದೇಷ್ಟರ ಕಚೇರಿ ಆವರಣದಲ್ಲಿ ಗೃಹರಕ್ಷಕ ದಳ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ವೃತ್ತಿಪರ ಸ್ಪರ್ಧೆ ಮತ್ತು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

‘ಸಾಮಾಜಿಕ ಜಾಲತಾಣಗಳು ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವುದು, ಟಿವಿ ವೀಕ್ಷಿಸುವುದರಿಂದ ರಾತ್ರಿ ಸರಿಯಾದ ನಿದ್ದೆ ಬರುವುದಿಲ್ಲ. ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ರಾತ್ರಿ ಸರಿಯಾದ ನಿದ್ದೆ ಮಾಡಿದರೆ ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕ ಸೇವೆ, ಕ್ರೀಡೆಯಲ್ಲಿ ಶಿಸ್ತು ಮತ್ತು ಸಹಕಾರ ಮುಖ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸರಿಯಾದ ಸಿದ್ಧತೆ ಬೇಕು. ಓಟಕ್ಕೆ ದೇಹ ಸ್ಪಂದಿಸುತ್ತದೆಯೇ ಎಂಬುದನ್ನು ಅರಿತುಕೊಳ್ಳಬೇಕು. ಗೃಹರಕ್ಷಕ ದಳ ಸೇರ್ಪಡೆಯಾದ ಬಳಿಕವೂ ಶಿಕ್ಷಣ ಮುಂದುವರಿಸಬೇಕು. ಸಕಾರಾತ್ಮಕ ಭಾವನೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪ್ರಜಾವಾಣಿ’ ಬ್ಯುರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಮಾತನಾಡಿದರು. ಕಮಾಂಡೆಂಟ್ ಡಾ. ಎಸ್‌.ಎಚ್‌. ಸುಜಿತ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.