ADVERTISEMENT

ಆಗ್ನೇಯ ಪದವೀಧರ ಕ್ಷೇತ್ರ; ನಾಗರಾಜ್ ಜೆಡಿಯು ಅಭ್ಯರ್ಥಿ

ಮಹಿಮಾ ಪಟೇಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:20 IST
Last Updated 3 ಜುಲೈ 2025, 15:20 IST
ಹರಿಹರ: ಮಹಿಮಾ ಜೆ.ಪಟೇಲ್
ಹರಿಹರ: ಮಹಿಮಾ ಜೆ.ಪಟೇಲ್   

ಹರಿಹರ: ಆಗ್ನೇಯ ಪದವೀಧರ ಕ್ಷೇತ್ರಕ್ಕೆ 2026ಕ್ಕೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಜೆಡಿಯು ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜ್ ಆಯ್ಕೆ ಮಾಡಲಾಗಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಜೆ. ಪಟೇಲ್ ತಿಳಿಸಿದರು.

‘ಈ ಕ್ಷೇತ್ರವು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದ್ದು, ಈಗಾಗಲೇ ಜಿಲ್ಲಾ ಕೇಂದ್ರಗಳ ಪ್ರವಾಸ ಮಾಡಿದ್ದು, ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಂಯುಕ್ತ ಜನತಾದಳ ಪಕ್ಷವು ಮುಂಬರುವ ದಿನಗಳಲ್ಲಿ ಪ್ರಜಾಸತ್ತಾತ್ಮಕ ಆಡಳಿತ ನೀಡಲು ನಿಶ್ಚಯಿಸಿದೆ. ಉತ್ತಮ ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ, ಪರಿಸರ ಕ್ಷೇತ್ರದಲ್ಲಿ ಬದಲಾವಣೆ ತರಬೇಕಾದ ಕಾರಣ ಪದವೀಧರರು ನಮ್ಮೊಂದಿಗೆ ಸಹಕರಿಸಬೇಕು’ ಎಂದು ಕೋರಿದರು.

ADVERTISEMENT

‘ದೇಶ ಹಾಗೂ ರಾಜ್ಯದಲ್ಲಿ ಕೇವಲ ಅಧಿಕಾರ ದಾಹಕ್ಕಾಗಿ ರಾಜಕಾರಣ ಮಾಡಲಾಗುತ್ತಿದೆ. ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಈಗಲೂ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಕರಾಳವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜೆಡಿಯು ಪಕ್ಷಕ್ಕೆ ರಾಜ್ಯದಲ್ಲಿ ಕೆಆರ್‌ಎಸ್, ಆಮ್ ಆದ್ಮಿ ಪಾರ್ಟಿ, ವಿವಿಧ ಕನ್ನಡಪರ ಮತ್ತು ದಲಿತ ಸಂಘಟನೆಗಳು ಕೈಜೋಡಿಸುತ್ತಿವೆ. ಸ್ವಾತಂತ್ರ‍್ಯ ಪೂರ್ವದಲ್ಲಿ ನಡೆದ ಹೋರಾಟಗಳಂತೆ ಇಂದಿನ ದುಃಸ್ಥಿತಿ ನಿವಾರಣೆಗೆ ಆಂದೋಲನಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕಳೆದ ಮೂರು ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದು ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ಈ ಬಾರಿ ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು ಗೆಲ್ಲುವ ವಿಶ್ವಾಸವಿದೆ’ ಎಂದು ಜೆಡಿಯು ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಪರಿಷತ್ ಅಭ್ಯರ್ಥಿ ಡಾ.ಕೆ.ನಾಗರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಮುಖಂಡರಾದ ಕೆ.ರಂಗನಾಥ್, ಜಿಲ್ಲಾ  ಘಟಕದ ಅಧ್ಯಕ್ಷ ಜಯಣ್ಣ, ಸಂಚಾಲಕ ನೀಲಗಿರಿಯಪ್ಪ, ಶಿವಯೋಗಿ, ಧಾರವಾಡದ ಶ್ರೀಶೈಲ ಗೌಡ್ರು, ವೀರಭದ್ರಪ್ಪ, ಶಿವಣ್ಣ, ನಾರಾಯಣಪ್ಪ ಗೌಡ್ರು, ರಮೇಶ್ ಕುಮಾರ್, ವಿವೇಕ್, ಯಾರಬ್, ಅಜೇಯ, ರಾಜೇರಾವ್, ಮುಸ್ಟೂರಪ್ಪ, ಸತೀಶ್, ಚಿನ್ಮಯ್, ಕುಮಾರಸ್ವಾಮಿ, ಮಂಜುನಾಥ, ಅಣ್ಣಪ್ಪ, ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.