ADVERTISEMENT

ಎಸ್‌ಪಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:37 IST
Last Updated 14 ಜೂನ್ 2021, 16:37 IST
 ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್
ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್   

ಹೊನ್ನಾಳಿ: ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್ ಅವರು ತಾಲ್ಲೂಕಿನ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗೆ ಸೂಚಿಸಿದ್ದಕ್ಕೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಿಟ್ಟಿಗೆದ್ದಿದ್ದಾರೆ. ಹೊನ್ನಾಳಿ ಸಿಪಿಐಗೆ ಕರೆ ಮಾಡಿ ಎಸ್‌ಪಿ ಅವರನ್ನು ಬೈದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಎಸ್ಪಿ ರಿಷ್ಯಂತ್ ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಮ್ಮತ್ರ ನಡೆಯೋಲ್ಲ. ದೊಡ್ಡ ಹೀರೋ ಏನ್ರೀ? ಸಣ್ಣ ಪುಟ್ಟ ಬಡಜನರು ಮನೆ ಕಟ್ಟಲು, ದೇವಸ್ಥಾನ ಕಟ್ಟಲು ಮರಳು ಒಯ್ಯುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಮಾರಿಕೊಳ್ಳುತ್ತಾರೆ. ಅಂಥವರ ಮರಳು ಸೀಜ್ ಮಾಡುತ್ತೀರಾ’ ಎಂದು ರೇಗಾಡಿರುವುದು ವಿಡಿಯೊದಲ್ಲಿದೆ.

‘ಎತ್ತಿನಗಾಡಿ ಮೇಲೆ ಮರಳು ಸಾಗಿಸೋರು ಜೂಜು, ಮಟ್ಕಾ ಆಡಿದ್ದಾರಾ, ಅತ್ಯಾಚಾರ ಮಾಡಿದ್ದಾರಾ? ಹೊಟ್ಟೆ ಪಾಡಿಗೆ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಇವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ತಾಕತ್ ಇದ್ರೆ ಸೀಜ್ ಮಾಡ್ರಿ.. ನೋಡೋಣ. ಬಡವರ ಹೊಟ್ಟೆ ಮೇಲೆ ಯಾಕ್ರೀ ಹೊಡೆಯಬೇಕು? ನೀವ್ಯಾರೂ ತಡೆಯಬಾರದು. ಮಟ್ಕಾ, ಜೂಜು ಆಡುವವರನ್ನು ಮಟ್ಟಹಾಕಲಿ. ತಾಲ್ಲೂಕಿನಲ್ಲಿ ಇಂದು ಕೇವಲ ₹ 3 ಸಾವಿರಕ್ಕೆ ಮರಳು ಸಿಗುತ್ತಿದೆ. ಈ ವ್ಯವಸ್ಥೆ ಇಲ್ಲದಿದ್ದರೆ ₹ 10 ಸಾವಿರಕ್ಕೆ ಮರಳು ದರ ಏರಿಕೆಯಾಗುತ್ತಿತ್ತು’–ಇಂತಹ ಮಾತು ವಿಡಿಯೊದಲ್ಲಿದೆ.

ADVERTISEMENT

ತಾಲ್ಲೂಕಿನ ಹರಳಹಳ್ಳಿ ಹಾಗೂ ಮಳಲಿ ಗ್ರಾಮಗಳ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿಯಾಗಿತ್ತು. ಈ ವಿಡಿಯೊ ಬಗ್ಗೆ ಪ್ರತಿಕ್ರಿಯೆಗಾಗಿ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.