ADVERTISEMENT

ದಾವಣಗೆರೆ | ಕೆಲಸದಲ್ಲೂ ಸ್ಪರ್ಧಾ ಮನೋಭಾವ ಇರಲಿ: ಐಜಿಪಿ ಕೆ. ತ್ಯಾಗರಾಜನ್‌

ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:12 IST
Last Updated 19 ನವೆಂಬರ್ 2022, 6:12 IST
ದಾವಣಗೆರೆಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ನಗರ ಉಪವಿಭಾಗ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು (ಎಡಚಿತ್ರ). ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್‌ ಮಾತನಾಡಿದರು
ದಾವಣಗೆರೆಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ನಗರ ಉಪವಿಭಾಗ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು (ಎಡಚಿತ್ರ). ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್‌ ಮಾತನಾಡಿದರು   

ದಾವಣಗೆರೆ: ಕ್ರೀಡೆಯಲ್ಲಿ ಪ್ರಶಸ್ತಿ ಪಡೆಯುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್‌ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ರೀಡೆಯಲ್ಲಿ ಹೇಗೆ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುತ್ತೇವೆಯೋ ಅದೇ ರೀತಿ ಕೆಲಸದಲ್ಲೂ ಸ್ಪರ್ಧಾ ಮನೋಭಾವ ಇರಬೇಕು. ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ (ಎಸ್‌ಪಿಸಿ) ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಇದರಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳಿಗೆ ರಕ್ಷಣಾ ಮನೋಭಾವ ಹಾಗೂ ಶಿಸ್ತುಸೇರಿ ಹಲವು ರೀತಿಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಸರ್ಕಾರ ವಹಿಸಿರುವ ಈ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸೋಣ’ ಎಂದರು.

ADVERTISEMENT

‘ಒಂದು ವರ್ಷದಿಂದ ಜಿಲ್ಲೆಯಲ್ಲಿ ದೊಡ್ಡ ಘಟನೆಗಳು ನಡೆದಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳು, ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣ. ಇದೇ ರೀತಿ ಈ ವರ್ಷದಲ್ಲೂ ನಿಷ್ಠೆಯಿಂದ ಕೆಲಸ ಮಾಡಿ ಇಲಾಖೆಗೆ ಒಳ್ಳೆಯ ಹೆಸರು ತನ್ನಿ’ ಎಂದು ಸಲಹೆ ನೀಡಿದರು.

‘ದಾವಣಗೆರೆ ಪೊಲೀಸರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದು ಹೀಗೆ ಮುಂದುವರಿಯಲಿ. ಮುಂದೆಯೂ ಸ್ಪರ್ಧಾತ್ಮಕ ಮನೋಭಾವದಿಂದ ಕೆಲಸ ಮಾಡಿ’ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಸ್ಪರ್ಧೆಗೆ ಸ್ಪಂದಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ರಿಷ್ಯಂತ್ ಹೇಳಿದರು.

ಕ್ರೀಡಾಕೂಟದಲ್ಲಿ ನಗರ ಉಪ ವಿಭಾಗ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಡಿಆರ್‌ಆರ್ ತಂಡ ರನ್ನರ್ ಅಪ್‌ ಆಯಿತು.

ಹಗ್ಗ– ಜಗ್ಗಾಟದಲ್ಲಿ ನಗರ ಪೊಲೀಸ್ ಉಪವಿಭಾಗ ತಂಡ ಜಯಗಳಿಸಿತು. ಡಿಎಆರ್‌ ತಂಡ ರನ್ನರ್‌ ಅಪ್‌ ಆಯಿತು. ಕ್ರಿಕೆಟ್‌ನಲ್ಲೂ ನಗರ ಪೊಲೀಸ್ ಉಪವಿಭಾಗ ತಂಡ ಜಯಗಳಿಸಿತು. ಡಿಎಆರ್‌ ತಂಡ ರನ್ನರ್‌ ಅಪ್‌ ಆಯಿತು.

ನಗರ ಉಪವಿಭಾಗ ಸಮಗ್ರ ಪ್ರಶಸ್ತಿ ಪಡೆಯಿತು. ಕೆಟಿಜೆ ನಗರ ಪೊಲೀಸ್‌ ಠಾಣೆಗೆ ‘ಉತ್ತಮ ಪತ್ತೆದಾರಿ ಪೊಲೀಸ್‌ ಠಾಣೆ’, ಡಿಸಿಆರ್‌ಬಿ, ಡಿಸಿಐಬಿ ವಿಭಾಗ ‘ಉತ್ತಮ ತನಿಖಾ ತಂಡ’, ಮಲೇಬೆನ್ನೂರಿನ ಸಿಪಿಸಿ ಶಿವಕುಮಾರ್‌ ‘ಬೆಸ್ಟ್‌ ರೈಟರ್‌’, ಚನ್ನಗಿರಿಯ ಸಿಎಚ್‌ಸಿ ಪಾಲಾನಾಯ್ಕ ‘ಬೆಸ್ಟ್‌ ಐಒ ಅಸಿಸ್ಟೆಂಟ್‌’, ಬಡಾವಣೆ ಪೊಲೀಸ್‌ ಠಾಣೆಯ ಮಾಲತಿ ಬಾಯಿ ಮಹಿಳೆಯರ ವಿಭಾಗದ ಜಾಂಪಿಯನ್‌, ಪುರುಷರ ವಿಭಾಗದಲ್ಲಿ ರಾಘವೇಂದ್ರ ಖಚವಿಜಾಂಪಿಯನ್‌ ಆಗಿ ಹೊರಹೊಮ್ಮಿದರು.

ಎಎಸ್‌ಪಿ ರಾಮಗೊಂಡ ಬಸರಗಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.