ADVERTISEMENT

ಶಿಕ್ಷಣ ಪ್ರೇಮ ತೋರಿಸಿದ ಮೊದಲ ಮಠಾಧೀಶ ಜಯದೇವ ಶ್ರೀ

64ನೇ ವರ್ಷದ ಸರಳ ರಥೋತ್ಸವಕ್ಕೆ ಚಾಲನೆ ನೀಡಿದ ಮರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:20 IST
Last Updated 15 ಸೆಪ್ಟೆಂಬರ್ 2020, 16:20 IST
ದಾವಣಗೆರೆಯ ಜಯದೇವ ವೃತ್ತದ ಬಳಿಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 64ನೇ ವರ್ಷದ ಸರಳ ರಥೋತ್ಸವ ಮತ್ತು ವಚನಗ್ರಂಥ ಮೆರವಣಿಗೆಯನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿ ಮೆರವಣಿಗೆಯಲ್ಲಿ ಸಾಗಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಗಳು ಹಾಗೂ ಭಕ್ತರು ಪಾಲ್ಗೋಂಡಿದ್ದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಯದೇವ ವೃತ್ತದ ಬಳಿಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 64ನೇ ವರ್ಷದ ಸರಳ ರಥೋತ್ಸವ ಮತ್ತು ವಚನಗ್ರಂಥ ಮೆರವಣಿಗೆಯನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿ ಮೆರವಣಿಗೆಯಲ್ಲಿ ಸಾಗಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಗಳು ಹಾಗೂ ಭಕ್ತರು ಪಾಲ್ಗೋಂಡಿದ್ದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಶಿಕ್ಷಣ ಪ್ರೇಮ ತೋರಿಸಿದ ಮೊದಲ ಮಠಾಧೀಶ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದರು.

ಇಲ್ಲಿನ ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಜಯದೇವಶ್ರೀಗಳ 64ನೇ ವರ್ಷದ ಸರಳ ರಥೋತ್ಸವ, ಶ್ರೀಗಳ ಭಾವಚಿತ್ರ ವಚನಗ್ರಂಥ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಮೂರು ಸಂಗತಿಗಳ ಮೂಲಕ ಜಗತ್ತಿನ ಇತಿಹಾಸವನ್ನು ತಿಳಿಯುತ್ತೇವೆ. ಪೌರಾಣಿಕ ಪುರುಷರು ಅಥವಾ ಕಾಲ್ಪನಿಕ ಲೋಕದ ದೇವಾನು ದೇವತೆಗಳ ಕಥೆಗಳು ಮೊದಲನೇಯದ್ದು. ರಾಜಮಹಾರಾಜರ ಯುದ್ಧ, ಆಡಳಿತ, ಸಾಮ್ರಾಜ್ಯಗಳ ವಿವರಗಳು ಎರಡನೇಯದ್ದು. ಸಾಮಾಜಿಕ ಸತ್ಪುರುಷರ ಸಾಧನೆಗಳು ಮೂರನೇಯದ್ದು. ಸತ್ಪುರುಷರನ್ನು ಸಮಾಜ ಸುಧಾರಕರು, ದಾರ್ಶನಿಕರು ಎಂದು ಕರೆಯಬಹುದು. ಅಂಥವರ ಸಾಲಿನಲ್ಲಿ ಜಯದೇವ ಶ್ರೀಗಳಿದ್ದಾರೆ ಎಂದರು.

ADVERTISEMENT

ನಿರಂತರ ಕ್ರಿಯಾಶೀಲರಾಗಿದ್ದ ಸ್ವಾಮೀಜಿ 19ನೇ ಶತಮಾನದಲ್ಲಿ ಪ್ರಸಾದ ಕೇಂದ್ರಗಳನ್ನು ತೆರೆದು ಶಿಕ್ಷಣಕ್ಕೆ ಒತ್ತು ನೀಡಿದರು. ತಮ್ಮ ಬಟ್ಟೆಯನ್ನು ತಾನೇ ಹೊಲಿದುಕೊಳ್ಳುವಷ್ಟು ಸರಳ ಜೀವನ ನಡೆಸಿದರು. ಚಿತ್ರದುರ್ಗದ ಮಠದಲ್ಲಿ ಅವರು ಬಳಸಿದ ವಸ್ತುಗಳೂ ಸೇರಿದಂತೆ ದೊಡ್ಡ ಮ್ಯೂಸಿಯಂ ಆರಂಭಗೊಳ್ಳುತ್ತಿದೆ. ಹಿಂದಿನ ಕಾಲದ ಪಾತ್ರೆ, ಸೌಟು, ಮಂಚದಿಂದ ಹಿಡಿದು ಎಲ್ಲ ವಸ್ತುಗಳಿವೆ. ಅವುಗಳನ್ನು ನೋಡಲು 2–3 ಗಂಟೆಗಳು ಬೇಕಾಗುತ್ತದೆ. ಅಷ್ಟೊಂದು ವೈವಿಧ್ಯಗಳಿವೆ. ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಜೀವನೋತ್ಸಾಹ ಕಳೆದುಕೊಂಡರೆ ಯುವಕರು ಕೂಡ ಮುದುಕರಂತೆ ಆಗುತ್ತಾರೆ. ಜೀವನೋತ್ಸಾಹ ಇದ್ದರೆ ಮುದುಕರೂ ಯುವಕರಂತಿರುತ್ತಾರೆ. ಆದರ್ಶದಿಂದ ಸಮಾಜಕ್ಕಾಗಿ ಬದುಕಿದವರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಗಳಾಗುತ್ತಾರೆ. ತನಗಾಗಿ ಬದುಕಿದವರು ಕಾಲಗರ್ಭದಲ್ಲಿ ಹೇಳ ಹೆಸರಿಲ್ಲದಾಗುತ್ತಾರೆ. ಮೊದಲನೇ ಸಾಲಿಗೆ ಸೇರಿದವರು ಜಯದೇವಶ್ರೀಗಳು ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಕಾಯಶುದ್ಧಿಗೆ ಕಾಯಕ ಮಾಡಬೇಕು. ಕೊರೊನಾದಿಂದ ದೂರ ಇರಲು ದೈಹಿಕ ಚಟುವಟಿಕೆ ಮತ್ತು ಎಚ್ಚರಿಕೆ ಇರಬೇಕು. ಅನ್ನದಾಸೋಹಿ, ಜ್ಞಾನದಾಸೋಹಿ ಆಗಿದ್ದ ಜಯದೇವ ಶ್ರೀಗಳನ್ನು ಕೊರೊನಾ ಕಾರಣದಿಂದ ಸರಳವಾಗಿ ನೆನಪಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.

ವೈದ್ಯ ಡಾ. ಎಸ್‌.ಎಂ. ಎಲಿ ಉಪಸ್ಥಿತರಿದ್ದರು. ರೋಶನ್‌ ಸ್ವಾಗತಿಸಿದರು. ಬಕ್ಕಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.