ಹರಿಹರ (ದಾವಣಗೆರೆ): ಇಲ್ಲಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ನಡೆದ ಎಸ್.ಟಿ ಸಮುದಾಯದ ಮುಖಂಡರ ಸಭೆಯಲ್ಲಿ ಮಾತಿನ ಚಕಮಕಿ ನಡೆದು, ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಜಾತಿ ಸಮೀಕ್ಷೆ ಸಂದರ್ಭ ಜಾತಿ ಕಾಲಂನಲ್ಲಿ ‘ನಾಯಕ’ ಎಂದು ಬರೆಸುವುದು, ಇತರೆ ಜಾತಿಯವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಸರ್ಕಾರದ ನಿರ್ಧಾರವನ್ನು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸುವ ಕುರಿತು ಸಭೆ ಆಯೋಜಿಸಲಾಗಿತ್ತು.
‘ವಾಲ್ಮೀಕಿ ನಿಗಮದ ಹಗರಣದಿಂದ ಕಾಂಗ್ರೆಸ್‌ನವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಗೆದ್ದರು. ಆದರೆ, ನಾಯಕ ಸಮುದಾಯದ ಸಚಿವರ (ನಾಗೇಂದ್ರ) ತಲೆದಂಡ ಆಯಿತು’ ಎಂದು ವೇದಿಕೆಯಲ್ಲಿದ್ದ ಬಿಜೆಪಿಯ ಎಸ್.ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು ದೂರಿದರು.
ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಳ್ಳಾರಿಯ ಕಾಂಗ್ರೆಸ್ ಸಂಸದ ಇ. ತುಕಾರಾಂ, ‘ಇದು ರಾಜಕೀಯ ವೇದಿಕೆಯಲ್ಲ. ನಾವು ರಾಜಕೀಯವಾಗಿ ಮಾತನಾಡಬೇಕೆಂದರೆ ಬಹಳಷ್ಟು ವಿಷಯಗಳಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಮುದಾಯದ ಮುಖಂಡರು ಬಂಗಾರು ಹನುಮಂತು ಅವರ ಕೈಲಿದ್ದ ಮೈಕ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಆಗ ಎರಡು ಗುಂಪುಗಳ ನಡುವೆ ಜೋರು ಗಲಾಟೆ ನಡೆಯಿತು. ಬೆಂಬಲಿಗರ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆಯಿತು. ಪರಸ್ಪರ ತಳ್ಳಾಟ, ನೂಕಾಟವೂ ನಡೆಯಿತು.
ಈ ಸಂದರ್ಭ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿದರು. ಕಿತ್ತಾಟದ ಬಗ್ಗೆ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಸೇರ್ಪಡೆಗೆ ವಿರೋಧ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಸರ್ಕಾರದೆದುರಿನ ಪ್ರಸ್ತಾವಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಸರ್ಕಾರದ ನಡೆ ವಿರೋಧಿಸಿ ಸೆ.25ರಂದು ರಾಜ್ಯದಾದ್ಯಂತ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು ಹಾಗೂ ಅ. 7ರಂದು ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಸನ್ನಾನಂದ ಪುರಿ ಸ್ವಾಮೀಜಿ ಸಭೆಯ ನಂತರ ತಿಳಿಸಿದರು.
ಪ್ರಮುಖರು ಗೈರು: ಪರಿಶಿಷ್ಟ ಪಂಗಡಕ್ಕೆ ಸೇರಿರುವ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಸೇರಿದಂತೆ ಪ್ರಮುಖರು ಸಭೆಗೆ ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.