ದಾವಣಗೆರೆ: ಈವರೆಗೆ 36 ಮದುವೆಗಳಿಗೆ ಸಾಕ್ಷಿಯಾಗಿದ್ದ ಇಲ್ಲಿನ ರಾಜ್ಯ ಮಹಿಳಾ ನಿಲಯ ಮತ್ತೆ ಮೂರು ಮದುವೆ ಮಾಡಿಸಲು ಸಜ್ಜಾಗಿದೆ. ಸೆ. 23ರಂದು ಮೂರು ವಿವಾಹಗಳು ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ 1977ರಲ್ಲಿ ರಾಜ್ಯ ಮಹಿಳಾ ನಿಲಯ ಆರಂಭಗೊಂಡಿತು. ಲೈಂಗಿಕ ಶೋಷಣೆಗೊಳಗಾದವರು, ದೈಹಿಕ–ಮಾನಸಿಕ ತೊಂದರೆ ಇರುವವರು, ಅನಾಥರು ಹೀಗೆ ಸಮಾಜದಲ್ಲಿ ನಾನಾ ತೊಂದರೆಗೆ ಸಿಲುಕಿದ ಮಹಿಳೆಯರು ಇಲ್ಲಿ ಆಶ್ರಯ ಪಡೆಯುತ್ತಾರೆ. 18 ವರ್ಷದ ಮೇಲಿನ ಮಹಿಳೆಯರು ಮತ್ತು 6 ವರ್ಷದ ಕೆಳಗಿನ ಮಕ್ಕಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತಿದೆ. 1980ರಲ್ಲಿ ಮೊದಲ ಮದುವೆ ನಡೆಯಿತು. ಒಟ್ಟು ಏಳು ಮಕ್ಕಳಿಗೆ ಇಲ್ಲಿಯೇ ನಾಮಕರಣ ನಡೆದಿದೆ.
ಮದುವೆ ಪ್ರಕ್ರಿಯೆ: ವಧು ಬೇಕಾದವರು ಮಹಿಳಾ ನಿಲಯವನ್ನು ಸಂಪರ್ಕಿಸುತ್ತಾರೆ. ಅವರಿಗೆ ಒಪ್ಪಿಗೆಯಾಗುವ ಯುವತಿಯರು ಇದ್ದರೆ ಸ್ವವಿವರದ ಅರ್ಜಿ ಸಲ್ಲಿಸುತ್ತಾರೆ. ಯಾವ ಜಿಲ್ಲೆಯಿಂದ ಅರ್ಜಿ ಬಂದಿದೆ ಎಂದು ನೋಡಿ ಆಯಾ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಇರುವ ಪರಿವೀಕ್ಷಣಾಧಿಕಾರಿಗೆ ಅರ್ಜಿಯ ಪ್ರತಿ ಕಳುಹಿಸಿಕೊಡಲಾಗುತ್ತದೆ. ಪರಿವೀಕ್ಷಣಾಧಿಕಾರಿ ಅರ್ಜಿದಾರನ ಮನೆಗೆ ತೆರಳಿ ಆತನಿಗೆ ಸಂಬಂಧಿಸಿದ ಪೂರ್ಣ ವಿವರ ಪಡೆಯುತ್ತಾರೆ. ಎಷ್ಟು ಆಸ್ತಿ ಇದೆ. ಏನು ಉದ್ಯೋಗ? ಆದಾಯ ಎಷ್ಟು? ಮೊಬೈಲ್ ಫೋನ್‌ಗಳು ಎಷ್ಟಿವೆ? ಹೀಗೆ ಎಲ್ಲ ವಿವರಗಳನ್ನು ಪಡೆಯಲಾಗುತ್ತದೆ. ಬಳಿಕ ಮದುವೆಯಾಗುವ ಹುಡುಗನ ಮೇಲೆ ಯಾವುದಾದರೂ ಪ್ರಕರಣ ದಾಖಲಾಗಿದಾ? ನ್ಯಾಯಾಲಯದಲ್ಲಿ ಪ್ರಕರಣಗಳಿವೆಯೇ ಎಂಬುದನ್ನು ಸಮೀಪದ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆಯಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ವರನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಮೇಲೆ ಅದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಪರಿಶೀಲನೆ ನಡೆದ ಮೇಲೆ ಜಿಲ್ಲಾ ಉಪನಿರ್ದೇಶಕರಿಗೆ ಬರುತ್ತದೆ. ಎಲ್ಲ ಕಡೆ ಒಪ್ಪಿಗೆಯಾದರೆ ಜಿಲ್ಲಾಧಿಕಾರಿಗೆ ಕಳುಹಿಸಿ ಮದುವೆಗೆ ದಿನ ನಿಗದಿ ಮಾಡಲು ಕೋರಲಾಗುತ್ತದೆ ಎಂದು ವಿವರಿಸಿದರು.
ಉತ್ತರಕನ್ನಡದವರೇ ಹೆಚ್ಚು: ರಾಜ್ಯದ ವಿವಿಧ ಕಡೆಗಳಿಗೆ ಇಲ್ಲಿಂದ ಮದುವೆಯಾಗಿ ಹೋಗಿದ್ದಾರೆ. ಒಟ್ಟು ಮದುವೆಗಳಲ್ಲಿ ಅರ್ಧದಷ್ಟು ಉತ್ತರ ಕನ್ನಡದವರೇ ಆಗಿದ್ದಾರೆ. ಆನಂತರದ ಸ್ಥಾನದಲ್ಲಿ ಶಿವಮೊಗ್ಗ ಇದೆ. ಮದುವೆಯಾದವರಲ್ಲಿ ಶೇ 90ರಷ್ಟು ಮಂದಿ ಕೃಷಿಕರು. ಶೇ 70ಕ್ಕಿಂತ ಅಧಿಕ ಬ್ರಾಹ್ಮಣ ಸಮುದಾಯದವರೇ ಮದುವೆಯಾಗಿದ್ದಾರೆ. ಪೌರೋಹಿತ್ಯ, ಕೃಷಿ ಮಾಡುವವರಿಗೆ ಹೆಣ್ಣು ಸಿಗುವುದು ಕಷ್ಟವಾಗಿರುವುದು ಇದಕ್ಕೆ ಕಾರಣ.
‘ಎಲ್ಲ ಕಡೆಗಳಿಂದ ಅರ್ಜಿಗಳು ಬರುತ್ತವೆ. ಅವರ ಪೂರ್ವಾಪರ ವಿಚಾರಿಸಿದಾಗ ಆದಾಯ ಬಹಳ ಕಡಿಮೆ ಇರುತ್ತದೆ. ಉತ್ತರ ಕನ್ನಡ, ಶಿವಮೊಗ್ಗ ಕಡೆಯಿಂದ ಬರುವವರಿಗೆ ಅಡಿಕೆ ತೋಟ, ಇನ್ನಿತರ ಆದಾಯ ಮೂಲಗಳು ಗಟ್ಟಿ ಇರುತ್ತವೆ. ಇಲ್ಲಿಂದ ಮದುವೆಯಾಗಿ ಹೋಗುವವರು ತೊಂದರೆಗೆ ಸಿಲುಕಬಾರದು ಎಂಬ ಕಾಳಜಿಯಿಂದ ಆದಾಯ ನೋಡಲೇಬೇಕಾಗುತ್ತದೆ. ಅಲ್ಲದೇ ಬೇರೆ ಕಡೆಗಳಿಂದ ಬರುವವರಲ್ಲಿ ಹೆಚ್ಚಿನವರಿಗೆ ವಯಸ್ಸು ದಾಟಿರುತ್ತದೆ’ ಎನ್ನುತ್ತಾರೆ ಕೆ.ಎಚ್. ವಿಜಯಕುಮಾರ್.
‘ಹಿಂದೆ ಮದುವೆಯಾದವರೆಲ್ಲ ಚೆನ್ನಾಗಿ ಬದುಕುತ್ತಿದ್ದಾರೆ. ಬಹುತೇಕ ಸಂದರ್ಭದಲ್ಲಿ ಇಲ್ಲಿನ ಯುವತಿಯರನ್ನು ಮದುವೆಯಾಗಲು ಅವರೇ ಬೇರೆಯವರಿಗೆ ತಿಳಿಸುತ್ತಿದ್ದಾರೆ’ ಎಂದು 20 ವರ್ಷಗಳಿಂದ ಮಹಿಳಾ ನಿಲಯದಲ್ಲಿ ಕೆಲಸ ಮಾಡುತ್ತಿರುವ ಈಗ ಪ್ರಭಾರ ಅಧೀಕ್ಷಕಿ ಆಗಿರುವ ಸುಜಾತಾ ತಿಳಿಸಿದರು.
ಇಂದು ಮೆಹಂದಿ, ನಾಳೆ ಮದುವೆ
24 ವರ್ಷದ ಮಂಜುಳಾ ಹೊಸನಗರ ಉಮೇಶ್ ಎಚ್.ಜಿ. ಅವರನ್ನು, 19 ವರ್ಷದ ರೇಷ್ಮಾ ಶಿರಸಿಯ ನಾಗರಾಜ ಸುಬ್ರಾಯ ಹೆಗಡೆಯವರನ್ನು, 21 ವರ್ಷದ ಕುಪ್ಪಮ್ಮ ಶಿರಸಿಯ ದಯಾನಂದ ಆರ್. ಭಟ್ಟ ಅವರನ್ನು ವರಿಸಲಿದ್ದಾರೆ. ಮದುವೆಯ ಪ್ರಯುಕ್ತ ಚಪ್ಪರ, ರಂಗೋಲಿ ಹಾಕುವ ಕಾರ್ಯ ಸೆ.22ರಂದು ನಡೆಯಲಿದೆ. ಬಳಿಕ ಮೆಹಂದಿ, ಹಳದಿಶಾಸ್ತ್ರ ದವಸಧಾನ್ಯ ಪೂಜೆ ಮುಂತಾದ ಮದುವೆ ಪೂರ್ವ ಕಾರ್ಯಗಳು ನಡೆಯಲಿವೆ. ಸೆ.23ರಂದು ಬೆಳಿಗ್ಗೆ 11ರಿಂದ 11.30ರ ಮಧ್ಯೆ ವಿವಾಹ ನೆರವೇರಲಿದೆ ಎಂದು ಮಹಿಳಾ ನಿಲಯದ ಪ್ರಭಾರ ಅಧೀಕ್ಷಕಿ ಸುಜಾತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.