ADVERTISEMENT

ಮದ್ಯ, ಮಾದಕ ವಸ್ತುಗಳಿಂದ ದೂರವಿರಿ: ವಿಠ್ಠಲ ರಾವ್

ಜಿಲ್ಲಾ ಪಂಚಾಯಿತಿ ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 8:00 IST
Last Updated 9 ಸೆಪ್ಟೆಂಬರ್ 2025, 8:00 IST
ಗಿತ್ತೆ ಮಾಧವ ವಿಠ್ಠಲರಾವ್‌
ಗಿತ್ತೆ ಮಾಧವ ವಿಠ್ಠಲರಾವ್‌   

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಯುವಕರು ಮದ್ಯ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಮಾನವ ಸಂಪನ್ಮೂಲ ಅಭಿವೃದ್ದಿಗೆ ಸವಾಲಾಗಿದೆ. ಯುವಸಮೂಹ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ದೂರವಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ರಾಷ್ಟ್ರೀಯ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ‘ಮಾದಕ ಮುಕ್ತ ಕರ್ನಾಟಕ’ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರು ಕುತೂಹಲಕ್ಕಾಗಿ ಮದ್ಯ ಮತ್ತು ಮಾದಕ ವಸ್ತು ಸೇವಿಸುತ್ತಾರೆ. ಕ್ರಮೇಣ ಅವುಗಳ ದಾಸರಾಗಿ ಭವಿಷ್ಯದ ಜೀವನವನ್ನೇ ನಾಶಪಡಿಸಿಕೊಳ್ಳುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿ ದುಷ್ಪರಿಣಾಮ ಬೀರುವುದರ ಜೊತೆಗೆ ಮಾರಣಾಂತಿಕ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ‘ಅತಿಯಾದ ಮೊಬೈಲ್ ಬಳಕೆಯೂ ಮಾನಸಿಕ ಆರೋಗ್ಯಕ್ಕೆ ಮಾರಕವಾಗಿದೆ. ಕೆಲಸದ ಒತ್ತಡ ಎಂಬ ಕಾರಣಗಳಿಗೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ಶೋಚನೀಯ. ಇಂತಹ ದುಶ್ಚಟಗಳಿಗೆ ಬಲಿಯಾದಲ್ಲಿ ದೇಶದ ಅಭಿವೃದ್ಧಿ ಕಷ್ಟ. ದುಶ್ಚಟಗಳಿಂದ ಒತ್ತಡ, ಸಮಸ್ಯೆಗಳು ನಿವಾರಣೆಯಾಗುವುದಿಲ್ಲ’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ತಪೋವನ ಆಯುರ್ವೇದ ಕಾಲೇಜು ಪ್ರಾಧ್ಯಾಪಕಿ ಡಾ.ಶಿಲ್ಪಾ ಹುಲಿಕಟ್ಟೆ ಉಪನ್ಯಾಸ ನೀಡಿದರು. ಡಿಡಿಪಿಐ ಜಿ.ಕೊಟ್ರೇಶ್, ಅಬಕಾರಿ ಉಪ ಆಯುಕ್ತ ಸಿ.ಎನ್.ಜುಸ್ಕಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.