ADVERTISEMENT

ಪೊಲೀಸ್ ಬಂದೋಬಸ್ತ್‌ನಲ್ಲಿ ಸ್ವಗ್ರಾಮ ತಲುಪಿದ ದೇವರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:26 IST
Last Updated 5 ಏಪ್ರಿಲ್ 2022, 5:26 IST
ನ್ಯಾಮತಿ ತಾಲ್ಲೂಕು ಮಾದನಬಾವಿ-ಬಸವನಹಳ್ಳಿ ಗ್ರಾಮಸ್ಥರ ನಡುವೆ ದೇವರ ಉತ್ಸವ ಮೂರ್ತಿ ಮೆರವಣಿಗೆ ವಿಚಾರದಲ್ಲಿ ಗಲಾಟೆ ಉಂಟಾಗಿದ್ದು ಎಸ್‌ಪಿ ಸಿ.ಬಿ. ರಿಷ್ಯಂತ್ ಅವರು ಗ್ರಾಮಸ್ಥರೊಡನೆ ಮಾತುಕತೆ ನಡೆಸಿದರು.
ನ್ಯಾಮತಿ ತಾಲ್ಲೂಕು ಮಾದನಬಾವಿ-ಬಸವನಹಳ್ಳಿ ಗ್ರಾಮಸ್ಥರ ನಡುವೆ ದೇವರ ಉತ್ಸವ ಮೂರ್ತಿ ಮೆರವಣಿಗೆ ವಿಚಾರದಲ್ಲಿ ಗಲಾಟೆ ಉಂಟಾಗಿದ್ದು ಎಸ್‌ಪಿ ಸಿ.ಬಿ. ರಿಷ್ಯಂತ್ ಅವರು ಗ್ರಾಮಸ್ಥರೊಡನೆ ಮಾತುಕತೆ ನಡೆಸಿದರು.   

ಮಾದನಬಾವಿ (ನ್ಯಾಮತಿ): ತಾಲ್ಲೂಕಿನ ಮಾದನಬಾವಿ ಗ್ರಾಮದ ಬೀರಲಿಂಗೇಶ್ವರ, ಮುರುಡೇಶ್ವರ, ರಂಗನಾಥಸ್ವಾಮಿ ಉತ್ಸವ ಮೂರ್ತಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ಭಾನುವಾರ ನಡುರಾತ್ರಿ ಸ್ವಗ್ರಾಮ ತಲುಪಿದ್ದು, ಬಿಗುವಿನ ವಾತಾವರಣ ತಿಳಿಗೊಂಡಿದೆ.

ಮಾದನಬಾವಿ ಗ್ರಾಮದ ಉತ್ಸವ ಮೂರ್ತಿಗಳು ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಸವನಹಳ್ಳಿ ಗ್ರಾಮದ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ಉಂಟಾಗಿತ್ತು. ಮಾದನಬಾವಿ ಗ್ರಾಮದ ದೇವರುಗಳು ಬಸವನಹಳ್ಳಿ ಮೂಲಕ ಸ್ವಗ್ರಾಮಕ್ಕೆ ಹೋಗದಂತೆ ಗ್ರಾಮಸ್ಥರು ಗುಂಪುಗೂಡಿ ರಸ್ತೆ ತಡೆ ಉಂಟು ಮಾಡಿದ್ದರಿಂದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಥೋತ್ಸವದ ನಂತರ ಮಾದನಬಾವಿ ಗ್ರಾಮಕ್ಕೆ ಹೊರಟಿದ್ದ ಗುಂಪನ್ನು ಪೊಲೀಸರು ತಡೆದು ಬೇರೆ ಮಾರ್ಗದಲ್ಲಿ ಮಾದನಬಾವಿಗೆ ಹೋಗುವಂತೆ ಮನವರಿಕೆ ಮಾಡಿದರೂ ಕೇಳದೆ ಬಸವನಹಳ್ಳಿ ಗ್ರಾಮದ ಮೂಲಕವೇ ಹೋಗುವುದಾಗಿ ಪಟ್ಟು ಹಿಡಿದಿತ್ತು. ಗೋವಿನಕೋವಿ-ಬಸವನಹಳ್ಳಿ ದಾರಿ ಮಧ್ಯದಲ್ಲಿಯೇ ಉತ್ಸವ ಮೂರ್ತಿಗಳೊಂದಿಗೆ ಕುಳಿತಿತ್ತು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್.ಪಿ. ರಾಮಗೊಂಡ ಬಿ. ಬಸರಂಗಿ ಅವರು ಗ್ರಾಮಸ್ಥರ ಮನವೊಲಿಸಿ ಉತ್ಸವ ಮೂರ್ತಿಗಳನ್ನು ಬಸವನಹಳ್ಳಿ ಗ್ರಾಮದ ಮೂಲಕ ಹಾಗೂ ಗ್ರಾಮಸ್ಥರು ಬೇರೆ ಮಾರ್ಗದಲ್ಲಿ ಸ್ವಗ್ರಾಮಕ್ಕೆ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಪೊಲೀಸ್ ಬಿಗಿಬಂದೋಬಸ್ತ್‌ನಲ್ಲಿ ದೇವರ ಉತ್ಸವ ಮೂರ್ತಿಗಳು ಬಸವನಹಳ್ಳಿ ಗ್ರಾಮದ ಮೂಲಕ ಮಾದನಬಾವಿ ತಲುಪಿವೆ. ಸ್ಥಳದಲ್ಲಿ ಚನ್ನಗಿರಿ ಡಿವೈಎಸ್‌ಪಿ ಸಂತೋಷ, ಚನ್ನಗಿರಿ ಸಿಪಿಐ ಮಧುಕುಮಾರ, ಹರಿಹರ ಸಿಪಿಐ ಸತೀಶ, ಹೊನ್ನಾಳಿ ಎಸ್‌ಐ ಬಸನಗೌಡ ಬಿರಾದಾರ, ನ್ಯಾಮತಿ ಎಸ್‌ಐ ಪಿ.ಎಸ್. ರಮೇಶ, ಹದಡಿ ಎಸ್‌ಐ ರೂಪಾ ತೆಂಬದ್ ಅವರೂ ಇದ್ದರು.

ಪ್ರಕರಣ ದಾಖಲು: ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾದನಬಾವಿ ಮತ್ತು ಬಸವನಹಳ್ಳಿ ಗ್ರಾಮಗಳ ಕೆಲವರ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಮತಿ ಸಬ್‌ಇನ್‌ಸ್ಪೆಕ್ಟರ್‌ ಪಿ.ಎಸ್. ರಮೇಶ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.