ADVERTISEMENT

ಅಪರಾಧ ಚಟುವಟಿಕೆ ಮುಂದುವರಿಸಿದರೆ ಕಠಿಣ ಕ್ರಮ: ಎಸ್‌ಪಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 2:43 IST
Last Updated 27 ಆಗಸ್ಟ್ 2021, 2:43 IST
ದಾವಣಗೆರೆಯ ‌ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ರೌಡಿ ಶೀಟರ್‌ಗಳ ಪೆರೇಡ್‌ ನಡೆಸಿದರು
ದಾವಣಗೆರೆಯ ‌ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ರೌಡಿ ಶೀಟರ್‌ಗಳ ಪೆರೇಡ್‌ ನಡೆಸಿದರು   

ದಾವಣಗೆರೆ: ‘ಪಂಚಾಯಿತಿ ಮಾಡೋದು, ಹಫ್ತಾ ವಸೂಲಿ ಮಾಡಿ ಜನರನ್ನು ಹೆದರಿಸುವುದು ಬಿಡಿ, ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಜಮೀನು ಸ್ವಾಧೀನ ಸಂಬಂಧ ಜನರಿಗೆ ತೊಂದರೆ ಕೊಡಬೇಡಿ. ಅಪರಾಧ ಚಟುವಟಿಕೆ ಮುಂದುವರಿಸಿದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ರೌಡಿ ಶೀಟರ್‌ಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಗು‌ರುವಾರ ಅವರು ರೌಡಿ ಶೀಟರ್‌ಗಳ ಪೆರೇಡ್ ನಡೆಸಿದರು.

‘ರೌಡಿ ಶೀಟರ್‌ಗಳು ತಮ್ಮದೇ ಗುಂಪು ಕಟ್ಟಿಕೊಂಡು ಜನರನ್ನು ಹೆದರಿಸಿಕೊಂಡು ಹಣ ಮಾಡುವುದು ಗಮನಕ್ಕೆ ಬಂದಿದೆ. ಇದನ್ನು ಮೊದಲು ಬಿಡಿ. ಸಮಾಜದಲ್ಲಿ ಎಲ್ಲರಿಗೂ ಬದಲಾಗುವ ಅವಕಾಶವಿದೆ. ಬದಲಾಗದೇ ಇದ್ದರೆ ನಿಮಗೆ ಬುದ್ಧಿ ಕಲಿಸೋದು ನಮಗೆ ಗೊತ್ತಿದೆ. ಅಪರಾಧ ಚಟುವಟಿಕೆ ಮುಂದುವರಿಸಿದರೆ ಜೀವನ ಪರ್ಯಂತ ಜೈಲಿನಲ್ಲಿರುವಂತೆ ಮಾಡಬಹುದು’ ಎಂದು ಎಚ್ಚರಿಸಿದರು.

ADVERTISEMENT

‘ಸಾಮಾನ್ಯ ಜನರಂತೆ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದಲಾಗಬೇಕು. ಈ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ ಹಾಗೂ ಈಚೆಗೆ ನಡೆಯುತ್ತಿರುವ ಕೊಲೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ರೌಡಿಶೀಟರ್ ಹೆಸರಿನಲ್ಲಿ ನೀವು ಮುಂದುವರಿದರೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ಸಿಗುವ ಕೆಲಸ, ಯೋಜನೆಗಳ ಸೌಲಭ್ಯ ಯಾವುದೂ ದೊರೆಯುವುದಿಲ್ಲ. ಎಚ್ಚರದಿಂದ ಜೀವನ ಸಾಗಿಸಿ’ ಎಂದರು.

‘ರೌಡಿ ಶೀಟರ್‌ ಪಟ್ಟಿಯಲ್ಲಿರುವವರು ಕೆಲವರು ಬದಲಾಗಿದ್ದಾರೆ. ಅವರ ಸನ್ನಡತೆ ನೋಡಿಕೊಂಡು ರೌಡಿಶೀಟರ್ ಪಟ್ಟಿಯಿಂದ ಹೆಸರು ತೆಗೆಯುವ ಕುರಿತು ಪರಿಶೀಲಿಸಲಾಗುವುದು. ರೌಡಿ ಶೀಟರ್‌ಗಳಿಂದ ಸಮಸ್ಯೆ ಅನುಭವಿಸಿರುವವರು ಅವರ ಬಗ್ಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಸಾರ್ವಜನಿಕರು ದೂರು ನೀಡಲು ಮುಂದಾದರೆ ರೌಡಿ ಶೀಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಎಎಸ್ಪಿ ರಾಜೀವ್, ಡಿವೈಎಸ್‌ಪಿನಾಗೇಶ್ ಐತಾಳ್ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.