ADVERTISEMENT

ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿ: ಮಮತಾ ಹೊಸಗೌಡರ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:48 IST
Last Updated 17 ಜೂನ್ 2021, 4:48 IST
ಸಾಸ್ವೆಹಳ್ಳಿ ಹೋಬಳಿಯಲ್ಲಿ ಕುಳಗಟ್ಟೆ ಗ್ರಾಮಕ್ಕೆ ದಾವಣಗೆರೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಬುಧವಾರ ಭೇಟಿ ನೀಡಿ ಜಾಗೃತಿ ಮೂಡಿಸಿದರು
ಸಾಸ್ವೆಹಳ್ಳಿ ಹೋಬಳಿಯಲ್ಲಿ ಕುಳಗಟ್ಟೆ ಗ್ರಾಮಕ್ಕೆ ದಾವಣಗೆರೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಬುಧವಾರ ಭೇಟಿ ನೀಡಿ ಜಾಗೃತಿ ಮೂಡಿಸಿದರು   

ಕುಳಗಟ್ಟೆ (ಸಾಸ್ವೆಹಳ್ಳಿ): ಕೊರೊನಾ ತಡೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಬಾರದು. ನಿಯಮಗಳ ಉಲ್ಲಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜನರನ್ನು ಜಾಗೃತರನ್ನಾಗಿ ಮಾಡುವ ಹೊಣೆಗಾರಿಕೆ ಸ್ಥಳೀಯ ಅಧಿಕಾರಿಗಳದ್ದಾಗಿದೆ. ಮೈ ಮರೆಯದೆ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹೇಳಿದರು.

ಹೋಬಳಿಯ ಸೀಲ್‌ಡೌನ್ ಆದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.

ಕುಳಗಟ್ಟೆ, ಸಾಸ್ವೆಹಳ್ಳಿ, ಹನುಮನಹಳ್ಳಿ, ಮಾವಿನಕೋಟೆ, ಐನೂರು ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಜನರು ಇದರ ಅರಿವೇ ಇಲ್ಲದೆ ಓಡಾಡುತ್ತಿದ್ದಾರೆ. ಅಧಿಕಾರಿಗಳು ಇದರ ಕಡೆ ಗಮನ ಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಗ್ರಾಮದಲ್ಲಿ ಈವರೆಗೆ ಒಟ್ಟು 127 ಸೋಂಕಿತರು ಪತ್ತೆಯಾಗಿದ್ದಾರೆ. ನಾಲ್ವರು ಮೃತರಾಗಿದ್ದಾರೆ. 100 ಜನರು ಗುಣಮುಖರಾಗಿದ್ದಾರೆ. 27 ಜನರು ಇನ್ನೂ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೆ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂಬ ಭಯದಿಂದ ಬಹಳಷ್ಟು ಜನರು ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಲಕ್ಷಣವಿದ್ದವರು ಮನೆಯಲ್ಲಿಯೇ ಮಾತ್ರೆಯನ್ನು ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಅಂಗಡಿ, ಹೋಟೆಲ್‍ಗಳು ನಿರಾಂತಕವಾಗಿ ನಡೆಯುತ್ತಿವೆ. ಇದನ್ನು ಗಮನಿಸಿ ಗ್ರಾಮಾಡಳಿತ ಕ್ರಮವಹಿಸಬೇಕು ಎಂದು ಕುಳಗಟ್ಟೆಯ ಜನರು ಮನವಿ ಮಾಡಿದರು.

ತಹಶೀಲ್ದಾರ್ ಬಸನಗೌಡ ಕೊಟೂರ, ಡಿವೈಎಸ್‍ಪಿ ಡಾ.ಕೆ.ಎಂ. ಸಂತೋಷ್, ಸಿಪಿಐ ದೇವರಾಜ್, ಪಿಎಸ್‍ಐ ಬಸವರಾಜ ಬಿರಾದಾರ್, ಎಎಸ್‍ಐ ಟಿ.ಪರಶುರಾಮಪ್ಪ, ಉಪತಶೀಲ್ದಾರ್ ಎಸ್. ಪರಮೇಶ್ ನಾಯ್ಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.