ADVERTISEMENT

ಸ್ವಚ್ಛತೆಯಲ್ಲಿ ದಾವಣಗೆರೆಯನ್ನು ಮೊದಲ ಸ್ಥಾನಕ್ಕೆ ತರಲು ಶ್ರಮಿಸಿ

ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 10:36 IST
Last Updated 28 ಆಗಸ್ಟ್ 2020, 10:36 IST
ದಾವಣಗೆರೆಯ ಮಹಾನಗರಪಾಲಿಕೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು. ಮೇಯರ್ ಬಿ.ಜಿ. ಅಜಯಕುಮಾರ್ ಇದ್ದರು.
ದಾವಣಗೆರೆಯ ಮಹಾನಗರಪಾಲಿಕೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು. ಮೇಯರ್ ಬಿ.ಜಿ. ಅಜಯಕುಮಾರ್ ಇದ್ದರು.   

ದಾವಣಗೆರೆ: ನಗರವನ್ನು ಸ್ವಚ್ಛತೆಯಲ್ಲಿ ನಂಬರ್–1 ಸ್ಥಾನ ಬರುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸಲಹೆ ನೀಡಿದರು.

ನಗರಪಾಲಿಕೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯವನ್ನು ವಿತರಿಸಿ ಅವರು ಮಾತನಾಡಿದರು.

‘ಸ್ವಚ್ಛತೆಯಲ್ಲಿಮೈಸೂರು ನಂಬರ್ 1 ಸ್ಥಾನದಲ್ಲಿದ್ದು, ದಾವಣಗೆರೆ ಕೊನೆಯ ಸ್ಥಾನದಲ್ಲಿದೆ ಎಂಬ ವಿಷಯ ತಿಳಿಯಿತು. ಅದು ಕಳೆದ ವರ್ಷದ ಸಮೀಕ್ಷೆ, ಮುಂದಿನ ದಿನಗಳಲ್ಲಿ ಪಾಲಿಕೆ ಎಲ್ಲ ಅಧಿಕಾರಿಗಳು ಸ್ವಚ್ಛತೆಗೆ ಶ್ರಮಿಸಲು ಕಟಿಬದ್ಧರಾಗಬೇಕು. ಸ್ಮಾರ್ಟ್‌ಸಿಟಿ ಯೋಜನೆಯಡಿ ₹200 ಕೋಟಿ ಖರ್ಚಾಗಿದ್ದು, ₹800 ಖರ್ಚು ಮಾಡಬೇಕಿದೆ. ನಾನು ಹೆಚ್ಚಿನ ಹಣ ತರಲು ಶ್ರಮಿಸುತ್ತೇನೆ. ದಾವಣಗೆರೆ ಮುಂಚೂಣಿಯಲ್ಲಿರಲು ಶ್ರಮಿಸಿ’ ಎಂದು ಹೇಳಿದರು.

ADVERTISEMENT

'ಕೇಂದ್ರ ಸರ್ಕಾರದ ‘ಆತ್ಮನಿರ್ಭರ್’ ಯೋಜನೆಯಡಿ ದಾವಣಗೆರೆಯಲ್ಲಿ ₹10 ಸಾವಿರ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, 115 ಮಂದಿ ಈ ಸೌಲಭ್ಯ ಪಡೆದಿದ್ದಾರೆ. ಶೇ 7ರಷ್ಟು ಬಡ್ಡಿದರವನ್ನು ಕೇಂದ್ರ ಸರ್ಕಾರ ತುಂಬಲಿದ್ದು, ಉಳಿದದ್ದನ್ನು ಫಲಾನುಭವಿಗಳು ಭರಿಸಬೇಕು. ಅರ್ಜಿ ಸಲ್ಲಿಸಿರುವ 1,200 ಮಂದಿಗೂ ಸಾಲ ನೀಡಬೇಕು' ಎಂದು ಹೇಳಿದರು.

ಮಹಾನಗರಪಾಲಿಕೆಗೆ ₹125 ಕೋಟಿ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹಿ ಮಾಡುವುದು ತಡವಾಗಿದ್ದರಿಂದ ಯೊಜನೆ ವಿಳಂಬವಾಯಿತು. ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ. ಕೊರೊನಾ ಮಧ್ಯೆಯೂ ಜುಲೈ ಅಂತ್ಯಕ್ಕೆ ₹15 ಕೋಟಿ ತೆರಿಗೆಯನ್ನು ಜನರು ಕಟ್ಟಿದ್ದಾರೆ. ಇದರಲ್ಲಿ ವಿದ್ಯುತ್ ದೀಪ, ಚರಂಡಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಲಿದ್ದು, ₹10 ಕೋಟಿ ಉಳಿಯುತ್ತದೆ.ಶಾಸಕ ಎಸ್.ಎ. ರವೀಂದ್ರನಾಥ್ ಮಹಾನಗರ ಪಾಲಿಕೆಗೆ ₹10 ಕೋಟಿ ಅನುದಾನ ತಂದಿದ್ದಾರೆ. ಪಾಲಿಕೆಯಲ್ಲಿ ₹5 ಕೋಟಿ ಉಳಿದಿದ್ದು, ₹25 ಕೋಟಿ ಖರ್ಚು ಮಾಡಿದ್ದಾರೆ. ಡಿಸೆಂಬರ್ ಆದ ಮೇಲೆ ಹೆಚ್ಚಿನ ಹಣ ತರುವ ಪ್ರಯತ್ನ ಮಾಡುತ್ತೇನೆ’ ಎಂದರು.

ಮೇಯರ್ ಬಿ.ಜಿ. ಅಜಯ್‌ಕುಮಾರ್ ಮಾತನಾಡಿ, ‘ಒಂದುತಿಂಗಳಲ್ಲಿ ₹3.78 ಕೋಟಿ ಹಣ ತಂದಿದ್ದು, ಅದನ್ನು ಕ್ರೀಡಾಪಟುಗಳಿಗೆ ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡವರಿಗೆ ವೈದ್ಯಕೀಯ ವೆಚ್ಚ ಹಾಗೂ ಮನೆಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು.ಶೇ 24.10 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ₹2.80 ಕೋಟಿ, ಶೇ 7.25 ನಿಧಿ ಅಡಿ 53.44 ಲಕ್ಷ, ಹಾಗೂ ಅಂಗವಿಕಲರಿಗೆ ₹43.86 ಲಕ್ಷ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 30ರೊಳಗೆ ಸರ್ಕಾರದ ಎಲ್ಲಾ ಅನುದಾನವನ್ನು ಫಲಾನುಭವಿಗಳಿಗೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

3 ಸಾವಿರ ವ್ಯಾಪಾರಿಗಳಿಗೆ ಸಾಲದ ಗುರಿ

‘ಆತ್ಮನಿರ್ಭರ್’ ಯೋಜನೆಯಡಿ 3 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಇದ್ದು, ಆ ಮೂಲಕ ರಾಜ್ಯದ 10 ಪಾಲಿಕೆಗಳಲ್ಲಿ ದಾವಣಗೆರೆ ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು. ನಗರದ ಜನರು ₹12 ಕೋಟಿಯಷ್ಟು ತೆರಿಗೆ ಪಾವತಿಸಿದ್ದು,ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. 15ನೇ ಹಣಕಾಸು ಯೋಜನೆಯಡಿ ₹35 ಕೋಟಿ ಹಣ ಬಂದಿದ್ದು, ಸಿವಿಲ್ ಕಾಮಗಾರಿ ₹ 17 ಕೋಟಿಗಳಲ್ಲಿ ಪ್ರತಿ ವಾರ್ಡ್‌ನಲ್ಲೂ ಸಿವಿಲ್ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಉಪಮೇಯರ್ ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್‌, ಸುನಿತಾ ಪ್ರಸನ್ನಕುಮಾರ್, ಜಯಮ್ಮ ಗೋಪಿನಾಯ್ಕ, ಗೌರಮ್ಮ ವೀರರಾಜು,ಸದಸ್ಯ ಪ್ರಸನ್ನಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ ಸ್ವಾಗತಿಸಿದರು.

ಏನೇನು ವಿತರಣೆ: ಶೇ 5ರ ಯೋಜನೆಯಡಿ ಅಂಗವಿಕಲರಿಗೆ 28 ಯಂತ್ರಚಾಲಿತ ವಾಹನ, ಮೂಗ ಹಾಗೂ ಕಿವುಡ ವಿದ್ಯಾರ್ಥಿಗಳಿಗೆ 19 ಲ್ಯಾಪ್‌ಟಾಪ್, ಶೇ 24.10ರ ಯೋಜನೆಯಡಿ 121 ಮ್ಯಾನುಯಲ್ ಸ್ಕ್ಯಾವೆಂಜರ್ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 55 ಹೊಲಿಗೆ ಯಂತ್ರ, 46 ಜೆರಾಕ್ಸ್‌ ಮಷಿನ್, 20 ತಳ್ಳುವ ಗಾಡಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.