ADVERTISEMENT

ಸಮಾನತೆಗಾಗಿ ಹೋರಾಟ: ಸಿದ್ಧಲಿಂಗಯ್ಯ ಪ್ರಮುಖರು

ಕವಿ ಡಾ.ಸಿದ್ಧಲಿಂಗಯ್ಯ ಬದುಕು-–ಬರಹ ಮೆಲುಕು ಕಾರ್ಯಕ್ರಮದಲ್ಲಿ ಜಾನಪದ ತಜ್ಞ ಈಶ್ವರಪ್ಪ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:37 IST
Last Updated 8 ಆಗಸ್ಟ್ 2021, 4:37 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ಕವಿ ನಾಡೋಜ ಡಾ.ಸಿದ್ಧಲಿಂಗಯ್ಯ ಬದುಕು-ಬರಹ ಒಂದು ಮೆಲುಕು ಕಾರ್ಯಕ್ರಮವನ್ನು ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ಕವಿ ನಾಡೋಜ ಡಾ.ಸಿದ್ಧಲಿಂಗಯ್ಯ ಬದುಕು-ಬರಹ ಒಂದು ಮೆಲುಕು ಕಾರ್ಯಕ್ರಮವನ್ನು ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.   

ದಾವಣಗೆರೆ: ಸಮಸಮಾಜ ನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಅವರ ಪಾತ್ರ ಗಮನಾರ್ಹ ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ಕವಿ ಡಾ.ಸಿದ್ಧಲಿಂಗಯ್ಯ ಬದುಕು-ಬರಹ ಒಂದು ಮೆಲುಕು ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

‘ದೇವನೂರ ಮಹಾದೇವ ಗಂಭೀರವಾದ ತತ್ವಕ್ಕೆ ಬದ್ಧನಾದ ಲೇಖಕ. ಆದರೆ ಗಂಭೀರತೆಯನ್ನು ಹಾಸ್ಯವಾಗಿ ಮಾಡಿ ತನ್ನ ಜೊತೆಯಲ್ಲಿದ್ದವರನ್ನು ಉಲ್ಲಾಸಗೊಳಿಸಿ ತನ್ನನ್ನು ಹಗುರ ಮಾಡಿಕೊಂಡವರು ಸಿದ್ಧಲಿಂಗಯ್ಯ. ಕಥೆ, ಕಾದಂಬರಿ, ಕವನ, ನಾಟಕ, ನಮ್ಮ ಜೀವನ ಸುಧಾರಣೆಗೆ, ಸಮಸಮಾಜ, ಸುಖೀ ಸಮಾಜಕ್ಕೆ ಕಾರಣಕರ್ತ ಆಗಬೇಕು. ಈ ಕೆಲಸವನ್ನು ಸಿದ್ಧಲಿಂಗಯ್ಯ ಅವರು ಹಾಸ್ಯದ ಮೂಲಕ ಚೆನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬಡವರನ್ನು, ನೊಂದವರನ್ನು ಅಸ್ಪ್ರೃಶ್ಯರನ್ನು ಚಿತ್ರಿಸಿದ್ದಾರೆ. ಮಹಾತ್ಮಗಾಂಧಿ ಹೇಳಿದಂತೆ ಅಸ್ಪೃಷ್ಯತೆ ದೇಶದ ದೊಡ್ಡ ಶಾಪ ಎಂದಿದ್ದರು. ಇಂದಿನ ದಿನಗಳಲ್ಲಿ ಕೋವಿಡ್ ಮನುಷ್ಯರನ್ನು ಮುಟ್ಟಿ ಮಾತನಾಡಿಸದಂತೆ ಮಾಡಿದೆ. ನಾವು ಒಬ್ಬರನ್ನು ಮುಟ್ಟಿ ಮಾತನಾಡಿಸಿದರೆ ಸಮ ಎಂದು ಪರಿಗಣಿಸಬೇಕಾಗುತ್ತದೆ. ಹಿಂದಿನಿಂದಲೂ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ’ ಎಂದು ವಿಷಾದಿಸಿದರು.

‘ಹಳ್ಳಿಯಲ್ಲಿ ಬದುಕಿದವರಿಗೆ ಮೇಲು ಸಮಾಜ, ಕೆಳ ಸಮಾಜ ಗೊತ್ತಾಗುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಕೆಳ ಸಮಾಜದವರು ಪ್ರತ್ಯೇಕ ಕೇರಿಗಳಲ್ಲಿ ಇರುವುದು. ಅವರಿಗೆ ಪ್ರತ್ಯೇಕ ನೀರಿನ ತಾಣ ನಿರ್ಮಾಣ ಮಾಡಿರುವುದು ನಮ್ಮ ಅನೂಚಾನವಾಗಿ ಬೆಳೆದು ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸಮಾನತೆ, ಸೋದರತ್ವ ಒಪ್ಪಿಕೊಂಡಿದ್ದೇವೆ. ಆದರೆ ನಾವೆಲ್ಲರೂ ಒಂದೇ ಆಗಬೇಕು ಎನ್ನುವ ಪರಿಕಲ್ಪನೆ ತೆಗೆದುಕೊಂಡು ಹೋಗಲು ಆಗಿಲ್ಲ’ ಎಂದು ವಿಷಾದಿಸಿದರು.

‘ಪಂಪನ ಬಳಿಕ ಸಮಸಮಾಜ ನಿರ್ಮಾಣ ಮಾಡಿದವರು ಬಸವಣ್ಣ. ಆದರೆ ಸ್ವಾತಂತ್ರ್ಯಾ ನಂತರ ಕ್ರಾಂತಿ ಮಾಡಿದವರು ಸಿದ್ಧಲಿಂಗಯ್ಯ ಹಾಗೂ ದೇವನೂರ ಮಹಾದೇವ. ಮನುಷ್ಯತ್ವ ಎಂದರೆ ಎಲ್ಲರಿಗೂ ಆಹಾರ, ಬಟ್ಟೆ ಶಿಕ್ಷಣ, ಉದ್ಯೋಗ ಸಿಗಬೇಕು. ಈ ಪರಂಪರೆಯನ್ನು ಬರವಣಿಗೆ ಮಾಡಿದವರಲ್ಲಿ ದೇವನೂರ ಮಹಾದೇವ ಹಾಗೂ ಸಿದ್ಧಲಿಂಗಯ್ಯ ಮಾಡಿದರು’ ಎಂದರು.

‘ದೇವರ ಹೆಸರಿನಲ್ಲಿ ನಡೆಯುವ ಮೌಢ್ಯದ ಬಗ್ಗೆಯೂ ಬರೆದಿದ್ದಾರೆ. ಉಕ್ಕಡಗಾತ್ರಿಯಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯವನ್ನು ವಿರೋಧ ವ್ಯಕ್ತಪಡಿಸಿದ ಈಶ್ವರಪ್ಪ ಅಲ್ಲಿ ಒಂದು ನಿಮ್ಹಾನ್ಸ್ ಆರಂಭಿಸಬೇಕಾಗಿದೆ’ ಎಂದು ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಪ್ರಾಸ್ತಾವಿಕ ನುಡಿಗಳನ್ನಾಡಿ, ‘ಇರುವಷ್ಟು ದಿವಸ ಸಾಮಾಜಿಕ ಸಂವೇದನೆ ಹೆಚ್ಚಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಬಿ. ರಾಮಚಂದ್ರ ಮಾತನಾಡಿ, ‘ಸಿದ್ಧಲಿಂಗಯ್ಯ ಅವರ ಅಗಲಿಕೆಯಿಂದ ಕರ್ನಾಟಕದ ವೈಚಾರಿಕ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಸಾಹಿತ್ಯ, ಸಮಸಮಾಜದ ಬದುಕಿಗೆ ಅಂತರ ಸಂಬಂಧವಿದೆ’ ಎಂದು ಸ್ಮರಿಸಿದರು.

‘ನನ್ನನ್ನು ದಲಿತ ಕವಿ ಎಂದು ಕರೆಯದೇ ಕನ್ನಡದ ಕವಿ ಎಂದು ಕರೆಯಿರಿ ಎಂದು ಹೇಳಿದ್ದರು. ಅವರು ಸಾಮಾಜಿಕ ನ್ಯಾಯವನ್ನು ಸಾಹಿತ್ಯದ ರೂಪದಲ್ಲಿ ಕಟ್ಟಿಕೊಟ್ಟಿದ್ದರು’ ಎಂದರು.

ಪತ್ರಕರ್ತ ಬಿ.ಎನ್. ಮಲ್ಲೇಶ್‌ ಮಾತನಾಡಿ, ‘ಸಿದ್ಧಲಿಂಗಯ್ಯ ಅವರ ಕಾವ್ಯಗಳು ಬಡವರಿಗೂ ಕೂಲಿಕಾರರಿಗೂ ಅರ್ಥವಾಗುತ್ತಿದ್ದವು. ಅವರ ಸಾಹಿತ್ಯವನ್ನು ಓದುವುದಕ್ಕಿಂತ ಗಟ್ಟಿ ದನಿಯಲ್ಲಿ ಕೇಳಿದರೆ ಅದರ ಶಕ್ತಿ ತಿಳಿಯುತ್ತಿತ್ತು. ಜನಪರ ಹಾಗೂ ಸಮಾಜಮುಖಿ ಕವಿಯಾಗಿದ್ದರು’ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿದರು. ಎ.ಆರ್. ಉಜ್ಜಿನಪ್ಪ, ವಿಧಾನಪರಿಷತ್ ಮಾಜಿ ಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ ಇದ್ದರು. ಡಾ.ವಾಮದೇವಪ್ಪ ವಂದಿಸಿದರು. ಐರಣಿ ಚಂದ್ರು ತಂಡ ಸಿದ್ಧಲಿಂಗಯ್ಯ ರಚಿಸಿದ ಗೀತೆಗಳನ್ನು ಹಾಡಿ ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.