ಬಸವಾಪಟ್ಟಣ: ಇಲ್ಲಿನ ದುರ್ಗಾಂಬಿಕಾ ಬಡಾವಣೆಯ ಮನೆಗಳಿಗೆ 20 ವರ್ಷಗಳಿಂದ ರಸ್ತೆ ಹಾಗೂ ಚರಂಡಿ ಸೌಲಭ್ಯ ಇಲ್ಲದೇ ನಿವಾಸಿಗಳು ಪರದಾಡುತ್ತಿದ್ದು, ಗ್ರಾಮ ಪಂಚಾಯಿತಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ಮಹಿಳೆಯರು ಆಗ್ರಹಿಸಿದ್ದಾರೆ.
ಈ ಬಡಾವಣೆಯು ಗ್ರಾಮದ ಹೊಸಕೆರೆ-2 ವ್ಯಾಪ್ತಿಗೆ ಸೇರಿದ್ದು, ರಸ್ತೆ ಮತ್ತು ಚರಂಡಿ ನಿರ್ಮಿಸುವ ಬಗ್ಗೆ 20 ವರ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯರು ಕೇವಲ ಆಶ್ವಾಸನೆ ಕೊಡುತ್ತಾ ಬಂದಿದ್ದಾರೆ. ಆದರೆ ಕೆಲಸ ಆಗಿಲ್ಲ. ಮನೆಗಳ ಮುಂದೆ ಹರಿಯುವ ಕೊಳಚೆ ನೀರಿನ ಮೇಲೆಯೇ ಎಲ್ಲರೂ ಓಡಾಡಬೇಕಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಭಾರತಿ.
ಪ್ರತಿ ವರ್ಷ ಮನೆ ಕಂದಾಯ ಮತ್ತು ನೀರಿನ ತೆರಿಗೆಯನ್ನು ತಪ್ಪದೇ ವಸೂಲು ಮಾಡುವ ಇಲ್ಲಿನ ಗ್ರಾಮ ಪಂಚಾಯಿತಿ, ಅಗತ್ಯ ಸೌಲಭ್ಯ ಕಲ್ಪಿಸುತ್ತಿಲ್ಲ. ಮನೆಗಳ ಹತ್ತಿರ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಬರಬಹುದೇ ವಿನಾ ಚಲಾಯಿಸಿಕೊಂಡು ಬರಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ದೊಡ್ಡ ವಾಹನಗಳಂತೂ ಇಲ್ಲಿಗೆ ಬರುವಂತಿಲ್ಲ. ಮಕ್ಕಳು, ರೋಗಿಗಳು ಮತ್ತು ವಯಸ್ಸಾದವರು ಈ ಮಾರ್ಗದಲ್ಲಿ ಓಡಾಡಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ನಿವಾಸಿ ಶಾರದಮ್ಮ.
ಮೂರು ತಿಂಗಳು ನಿರಂತರವಾಗಿ ಸುರಿದ ಮಳೆಯ ಸಂದರ್ಭದಲ್ಲಿ ಇಲ್ಲಿ ಓಡಾಟ ನರಕ ಸದೃಶ್ಯವಾಗಿತ್ತು. ಎರಡು ಅಡಿ ಅಗಲದ ರಸ್ತೆಯಲ್ಲಿ, ಮೇಲ್ಭಾಗದ ಮನೆಗಳಿಂದ ಹರಿಯುವ ಸ್ನಾನದಮನೆ ಮತ್ತು ಶೌಚಾಲಯದ ಕೊಳಚೆ ನೀರನ್ನು ತುಳಿದುಕೊಂಡೇ ಓಡಾಡಬೇಕಿತ್ತು. ಈ ಸಂಕಟವನ್ನು ಹಲವು ವರ್ಷಗಳಿಂದ ಅನುಭವಿಸುತ್ತಿದ್ದು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದರೂ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಎಂದು ನಿವಾಸಿಗಳಾದ ಕವಿತಾ, ವೀರಮ್ಮ, ಪುಷ್ಪಾ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.