ಸಾವು (ಪ್ರಾತಿನಿಧಿಕ ಚಿತ್ರ)
ಹರಿಹರ: ನಗರದ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ರೈಲು ಹಳಿ ದಾಟುವಾಗ ರೈಲೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಳ್ಳಾರಿಯ ಸತ್ಯವಾಣಿ ನಗರದ ನಿವಾಸಿ, ಮೈಸೂರಿನ ಜೆಎಸ್‌ಎಸ್ ಕಾಲೇಜಿನ 2ನೇ ವರ್ಷದ ಎಂಬಿಎ ವಿದ್ಯಾರ್ಥಿನಿ ಶ್ರಾವಣಿ (24) ಮೃತಪಟ್ಟವರು.
ಶ್ರಾವಣಿಯ ತಂದೆ ಬಾಬು ಎಸ್.ಜಿ. ಅವರ ಚಿಕ್ಕಪ್ಪ ಸತ್ಯನಾರಾಯಣರಾವ್ ಅವರು ಹರಿಹರದಲ್ಲಿ ವಾಸವಿದ್ದಾರೆ. ಅವರ ಮನೆಯಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರಾವಣಿ ಮೈಸೂರಿನಿಂದ ರೈಲಿನ ಮೂಲಕ ಹರಿಹರಕ್ಕೆ ಬಂದಿದ್ದರು.
ರೈಲು ನಿಲ್ದಾಣದಲ್ಲಿ ಇಳಿದಾಗ ಶ್ರಾವಣಿಯ ಅಜ್ಜ ಸತ್ಯನಾರಾಯಣರಾವ್ ಸಿಕ್ಕಿದ್ದರು. ಇಬ್ಬರೂ ನಿಲ್ದಾಣದಿಂದ ಹೊರಗೆ ಬರಲು ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ.
ಘಟನೆಯಿಂದಾಗಿ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಇಲ್ಲಿನ ತಾತನ ಮನೆಯಲ್ಲಿ ದುಃಖ ಮಡುಗಟ್ಟಿದೆ. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.