ADVERTISEMENT

ಶಾಲೆಗೆ ಹೋಗದಂತೆ ಬೆದರಿಸಿ SSLC ಓದುತ್ತಿದ್ದ ಮಗಳ ಪುಸ್ತಕ ಸುಟ್ಟ ಕುಡುಕ ತಂದೆ!

ನ್ಯಾಮತಿ: ಸಹಾಯವಾಣಿಗೆ ಕರೆ ಮಾಡಿ ಮದ್ಯವ್ಯಸನಿ ತಂದೆಯಿಂದಾಗುವ ಸಮಸ್ಯೆ ಹೇಳಿಕೊಂಡ ಬಾಲಕಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:42 IST
Last Updated 13 ಫೆಬ್ರುವರಿ 2026, 2:42 IST
<div class="paragraphs"><p>ಸಹಾಯವಾಣಿ ಸಾಂದರ್ಭಿಕ ಚಿತ್ರ</p></div>

ಸಹಾಯವಾಣಿ ಸಾಂದರ್ಭಿಕ ಚಿತ್ರ

   

ನ್ಯಾಮತಿ: ಕುಡಿತದ ಚಟಕ್ಕೆ ದಾಸನಾಗಿದ್ದ ತಂದೆ, ಮಗಳಿಗೆ ಶಾಲೆಗೆ ಹೋಗದಂತೆ ಬೆದರಿಕೆ ಹಾಕಿ, ಶಾಲಾ ಪಠ್ಯ ಪುಸ್ತಕಗಳನ್ನು ಸುಟ್ಟುಹಾಕಿ ತೋರಿದ ದುರ್ವರ್ತನೆಯಿಂದ ಬೇಸತ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಸಹಾಯವಾಣಿಯ ಮೊರೆ ಹೋಗಿ, ಸಮಸ್ಯೆಗೆ ಪರಿಹಾರದ ದಾರಿ ಕಂಡುಕೊಂಡಿದ್ದಾಳೆ.

ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ತನ್ನ ತಂದೆಯ ವಿರುದ್ಧ ಸಿಡಿದೆದ್ದು, 112 ಸಹಾಯವಾಣಿ ಸಂಖ್ಯೆಗೆ ಈಚೆಗೆ ಕರೆ ಮಾಡಿ, ತನಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದ್ದಳು. ತಕ್ಷಣ ಸ್ಪಂದಿಸಿದ ಪೊಲೀಸರು, ವಿದ್ಯಾರ್ಥಿನಿಯನ್ನು ಭೇಟಿಯಾಗಿ, ಹೊಸ ಪುಸ್ತಕಗಳನ್ನು ಕೊಡಿಸಿ, ಧೈರ್ಯ ಹೇಳಿದ್ದರು. ತಾಲ್ಲೂಕು ಆಡಳಿತದ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಹುಡುಗಿಯ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಂತರು.

ADVERTISEMENT

ತಂದೆಯಿಂದ ಓದಿಗೆ ತೊಂದರೆ ಆಗಿದ್ದು, ಬಾಲಕಿಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಗಮನಹರಿಸುವಂತೆ ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಈ ಸಂದರ್ಭ ಸೂಚನೆ ನೀಡಿದರು.

ವಿದ್ಯಾರ್ಥಿನಿಯ ತಂದೆಯನ್ನು ಕುಡಿತದ ಚಟ ಬಿಡಿಸುವ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು ಎಂದ ಅವರು, ‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿನಿಗೆ ವಸತಿ ನಿಲಯದ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿನಿಯ ಈಗಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು’ ಎಂದು ಶಾಲೆಯ ಶಿಕ್ಷಕರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಪಿ. ಕವಿರಾಜ, ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್. ರವಿ, ಸಿಡಿಪಿಒ ಎಸ್.ಎಸ್. ಜ್ಯೋತಿ, ಬಿಇಒ ಕೆ.ಟಿ. ನಿಂಗಪ್ಪ ಕಂದಾಯ ಇಲಾಖೆ ಅಧಿಕಾರಿಗಳಾದ ಎಂ.ಪಿ. ವೃಷಭೇಂದ್ರಸ್ವಾಮಿ, ಶಿವಕುಮಾರ ಹಾಗೂ ಶಾಲೆಯ ಸಹಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.