ADVERTISEMENT

ಸೈಬರ್‌ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಅಗತ್ಯ

ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಹಾರೂನ್ ರಶೀದ್ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 13:45 IST
Last Updated 2 ಏಪ್ರಿಲ್ 2023, 13:45 IST
ದಾವಣಗೆರೆ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪೊಲೀಸ್‌ ಸ್ಟ್ಯಾಂಪ್ ಅನ್ನು ಐಜಿಪಿ ಡಾ.ಕೆ. ತ್ಯಾಗರಾಜನ್‌ ಅವರಿಗೆ ಎಸ್‌ಪಿ ಸಿ.ಬಿ. ರಿಷಯ್ಂತ್‌ ನೀಡಿದರು. ನಿವೃತ್ತ ಎಎಸ್‌ಐ ಹಾರೂನ್‌ ರಶೀದ್‌, ಎಎಸ್‌ಪಿ ಆರ್‌.ಬಿ. ಬಸರಗಿ ಇದ್ದರು.
ದಾವಣಗೆರೆ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪೊಲೀಸ್‌ ಸ್ಟ್ಯಾಂಪ್ ಅನ್ನು ಐಜಿಪಿ ಡಾ.ಕೆ. ತ್ಯಾಗರಾಜನ್‌ ಅವರಿಗೆ ಎಸ್‌ಪಿ ಸಿ.ಬಿ. ರಿಷಯ್ಂತ್‌ ನೀಡಿದರು. ನಿವೃತ್ತ ಎಎಸ್‌ಐ ಹಾರೂನ್‌ ರಶೀದ್‌, ಎಎಸ್‌ಪಿ ಆರ್‌.ಬಿ. ಬಸರಗಿ ಇದ್ದರು.   

ದಾವಣಗೆರೆ: ಸೈಬರ್ ಅಪರಾಧ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಆಗ ಸೈಬರ್ ಅಪರಾಧ ತಡೆಯಲು ಸಾಧ್ಯ ಎಂದು ನಿವೃತ್ತ ಸಹಾಯಕ ಉಪ ನಿರೀಕ್ಷಕ ಹಾರೂನ್ ರಶೀದ್ ತಿಳಿಸಿದರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸೈಬರ್‌ ನಿಯಮ ಮತ್ತು ಸಂಚಾರ ನಿಯಮಗಳನ್ನು ಅತಿ ಹೆಚ್ಚು ಉಲ್ಲಂಘಿಸಲಾಗುತ್ತಿದೆ. ಇವೆರಡು ನಿಯಂತ್ರಣಕ್ಕೆ ಬರಬೇಕಿದ್ದರೆ ಯುವಜನರು ಜಾಗೃತಗೊಳ್ಳಬೇಕು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಂಚಾರ ನಿಯಮಗಳ ಬಗ್ಗೆ ಮತ್ತು ಸೈಬರ್‌ ಅಪರಾಧಗಳ ಬಗ್ಗೆ ಅರಿವು ಮೂಡಿಸಬೇಕು. ಆಗ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ. ಸೈಬರ್‌ ಅಪರಾಧವೂ ನಿಯಂತ್ರಣವಾಗುತ್ತದೆ. ಇಂಥ ಕಾರ್ಯಗಳಿಗೆ ಪೊಲೀಸ್‌ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ದೇಹವನ್ನು ಸದಾ ಚಟುವಟಿಕೆಯಿಂದ ಇಟ್ಟುಕೊಳ್ಳಲು ಯೋಗಭ್ಯಾಸ ಮಾಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪೊಲೀಸ್ ಇಲಾಖೆಯಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ಸಲ್ಲಿಸಿ ನಿವೃತ್ತಿಯಾದವರ ಕಲ್ಯಾಣಕ್ಕಾಗಿ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಗಡಿ ರಕ್ಷಣೆಯಲ್ಲಿ ಸೈನಿಕರ ಪಾತ್ರ ಎಷ್ಟು ಮುಖ್ಯವೋ, ಅದೇರೀತಿ ಸಾರ್ವಜನಿಕರ ಜೀವ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದರು.

2022-23ರ ಸಾಲಿನಲ್ಲಿ ನಿವೃತ್ತರಾದ 15 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ನಾನಾ ಪೊಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಸ್ವಾಗತಿಸಿದರು. ಎಎಸ್ಪಿ ಆರ್.ಬಿ. ಬಸರಗಿ ವಂದಿಸಿದರು. ದೇವರಾಜ್‌, ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.