ADVERTISEMENT

ಡಿಜಿಟಲ್‌ ತಂತ್ರಜ್ಞಾನದ ಕೌಶಲ ಇರಲಿ: ಶ್ರೀನಿವಾಸ್‌ ರಾಮಾನುಜಂ

ವಿಚಾರಸಂಕಿರಣದಲ್ಲಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 11:14 IST
Last Updated 19 ಜನವರಿ 2019, 11:14 IST
ದಾವಣಗೆರೆಯ ಬಿ.ಎಸ್‌.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರಸಂಕಿರಣವನ್ನು ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್‌ ಉದ್ಘಾಟಿಸಿದರು
ದಾವಣಗೆರೆಯ ಬಿ.ಎಸ್‌.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರಸಂಕಿರಣವನ್ನು ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್‌ ಉದ್ಘಾಟಿಸಿದರು   

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳೂ ಡಿಜಿಟಲ್‌ ತಂತ್ರಜ್ಞಾನವನ್ನು ಬೇಡುತ್ತಿವೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಬಗೆಗಿನ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಕರ್ನಾಟಕ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌)ನ ಅಕಾಡೆಮಿಕ್ ರಿಲೇಷನ್‌ಶಿಪ್‌ ಮ್ಯಾನೇಜರ್‌ ಶ್ರೀನಿವಾಸ್‌ ರಾಮಾನುಜಂ ಕಿವಿಮಾತು ಹೇಳಿದರು.

ಇಲ್ಲಿನ ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಜ್ಞಾನ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ’ಬ್ಯುಸಿನೆಸ್‌ ಅನಾಲಿಟಿಕ್ಸ್‌ ಅಂಡ್‌ ಮಷಿನ್‌ ಲರ್ನಿಂಗ್‌‘ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.

ತಂತ್ರಜ್ಞಾನ ದಿನದಿಂದ ದಿನಕ್ಕೆ ಮಾರ್ಪಾಡಾಗುತ್ತಿದೆ. ಇದು ಡಿಜಿಟಲ್‌ ಯುಗ. ತಂತ್ರಜ್ಞಾನದ ಕ್ರಾಂತಿಯ ಬಗ್ಗೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಇಂದು ಕಂಪ್ಯೂಟರ್‌ ಜ್ಞಾನ ಇಲ್ಲದಿದ್ದರೆ ಉದ್ಯೋಗ ಸಿಗುವುದು ದುರ್ಲಭ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ADVERTISEMENT

ಯಾವುದೇ ಒಂದು ವಸ್ತು ಗ್ರಾಹಕರನ್ನು ಆಕರ್ಷಿಸುವಂತೆ ಮಾಡುವ ನೈಪುಣ್ಯ ಎಷ್ಟು ಮುಖ್ಯವೋ ಹಾಗೇ ಆ ಗ್ರಾಹಕ ಬೇರೆ ವಸ್ತುವಿನೆಡೆಗೆ ಹೋಗದಂತೆ ಹಿಡಿದಿಡುವ ಜಾಣ್ಮೆಯೂ ಅಷ್ಟೇ ಮುಖ್ಯ. ಈ ರೀತಿಯ ಜಾಣ್ಮೆ ರೂಢಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರಬೇಕು ಎಂದು ಸಲಹೆ ನೀಡಿದರು.

ರೊಬೊಟಿಕ್‌ ತಂತ್ರಜ್ಞಾನದ ಬಗ್ಗೆ ವಿವರಿಸಿದ ಅವರು, ’ಪಾಶ್ಚಿಮಾತ್ಯ ದೇಶಗಳಲ್ಲಿ ರೊಬೊಟ್ ಮೂಲಕವೇ ಎಲ್ಲ ಕೆಲಸ ನಿರ್ವಹಿಸುವ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ಅಲ್ಲಿ ರೊಬೊಟ್‌ವೊಂದಕ್ಕೆ ಮಹಿಳೆಯೊಬ್ಬರು ರೆಡ್‌ ಲೇಬಲ್‌ ಚಹಾ ತರಲು ಹೇಳಿದರೆ ಅದು ವಿವಿಧ ಬಗೆಯ ಮದ್ಯ ತಂದರೆ ಅಲ್ಲಿನ ಮಹಿಳೆಗೆ ಅದು ದೊಡ್ಡ ವಿಷಯವಲ್ಲ. ಆದರೆ ಅದೇ ರೊಬೊಟ್‌ ಭಾರತೀಯ ಮಹಿಳೆಗೆ ಚಹಾ ಬದಲು ಮದ್ಯದ ಬಗ್ಗೆ ತಿಳಿಸಿದರೆ ಆಭಾಸವಾಗುತ್ತದೆ. ಈ ರೀತಿಯ ಸೂಕ್ಷ್ಮತೆಗಳ ಅರಿವು ತಂತ್ರಜ್ಞಾನ ರೂಪಿಸುವವರಲ್ಲಿ ಇರಬೇಕು ಎಂದು ಮನಮುಟ್ಟುವಂತೆ ತಿಳಿಸಿದರು.

ಯು.ಬಿ.ಡಿ.ಟಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ್‌ ಕೆ.ಎಸ್‌., ’ವಿದ್ಯಾರ್ಥಿಗಳು ಎಲ್ಲ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಇಂದು ವಿಶ್ವ ಭಾರತೀಯ ಎಂಜಿನಿಯರುಗಳನ್ನು ಬೆರಗಿನಿಂದ ನೋಡುತ್ತಿದೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಹೆಚ್ಚು ಬೇಡಿಕೆ ಇದೆ ಹೊರತು ಚೀನಾ ಎಂಜಿನಿಯರುಗಳಿಗೆ ಅಲ್ಲ. ಯಂತ್ರದ ಬಗೆಗಿನ ಜ್ಞಾನ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಬೇಕು‘ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ ಬಣಕಾರ, ’ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಬಾರದು. ನಿಮ್ಮ ಸಮಸ್ಯೆಗಳ ಬಗ್ಗೆ ಹಿರಿಯರು, ಶಿಕ್ಷಕರೊಡನೆ ಚರ್ಚಿಸಬೇಕು. ಯಾವುದೇ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು‘ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಪ್ರೊ.ಎಂ. ಎಚ್‌. ಬೇತೂರಮಠ, ಡಾ.ಷಣ್ಮುಖ ಕೆ., ಪ್ರೊ. ರಾಜಶೇಖರ್‌ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.