ADVERTISEMENT

ಯಶಸ್ವಿ ಕಾರ್ಯಾಚರಣೆ: ಮುಸಿಯಾಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:45 IST
Last Updated 9 ಆಗಸ್ಟ್ 2020, 16:45 IST
ಹರಿಹರದ ರಾಜನಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಸಿಲುಕಿದ್ದ ಮುಸಿಯಾಗಳು ಭಾನುವಾರ ಹಗ್ಗದ ಸೇತುವೆ ಮೂಲಕ ದಂಡೆಗೆ ಬರುತ್ತಿರುವುದು
ಹರಿಹರದ ರಾಜನಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಸಿಲುಕಿದ್ದ ಮುಸಿಯಾಗಳು ಭಾನುವಾರ ಹಗ್ಗದ ಸೇತುವೆ ಮೂಲಕ ದಂಡೆಗೆ ಬರುತ್ತಿರುವುದು   

ಹರಿಹರ: ತಾಲ್ಲೂಕಿನ ರಾಜನಹಳ್ಳಿ ಸಮೀಪದ ತುಂಗಭದ್ರಾ ನದಿ ಮಧ್ಯದ ಮರದಲ್ಲಿ ಸಿಲುಕಿದ್ದ ಮುಸಿಯಾಗಳ ರಕ್ಷಣೆ ಕಾರ್ಯ ಭಾನುವಾರ ಯಶಸ್ವಿಯಾಗಿದ್ದು, ಮುಸಿಯಾ(ಮಂಗ)ಗಳನ್ನು ಸುರಕ್ಷಿತವಾಗಿ ದಂಡೆಗೆ ಕರೆತರಲಾಯಿತು.

ರೋಪ್‌ ಲ್ಯಾಡರ್‌‌ ಮೂಲಕ ಮುಸಿಯಾಗಳನ್ನು ರಕ್ಷಿಸಿದ ಅರಣ್ಯ ಇಲಾಖೆ, ಪೊಲೀಸ್‍ ಇಲಾಖೆ ಹಾಗೂ ಅಗ್ನಿ ಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ತುಂಗಭದ್ರಾ ನದಿ ಪಾತ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲ ದಿನಗಳಿಂದ ಸುರಿದ ನಿರಂತರ ಮಳೆಯಿಂದ 60-70 ಮುಸಿಯಾಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಬಂದು ರಾಜನಹಳ್ಳಿ ಗ್ರಾಮದ ಬಳಿಯ ನದಿಯ ಮರದಲ್ಲಿ ಸಿಲುಕಿಕೊಂಡಿದ್ದವು. ನಾಲ್ಕು ದಿನಗಳ ಕಾಲ ಆಹಾರವಿಲ್ಲದೇ ನರಳಿದ್ದವು. ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸರು, ಮೀನುಗಾರರು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ನದಿ ದಂಡೆಯಿಂದ 70 ಮೀಟರ್‍ ದೂರದಲ್ಲಿದ್ದ ಮರಗಳಿಂದ ಮುಸಿಯಾಗಳನ್ನು ದಂಡೆಗೆ ತರಲು ಹಲವು ರೀತಿಯ ಪಯತ್ನ ನಡೆಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೆ ಮರದಿಂದ ದಂಡೆಗೆ ಹಗ್ಗದ ಏಣಿ ನಿರ್ಮಿಸುವ ಮೂಲಕ ಕಾರ್ಯಾಚರಣೆ ನಡೆಸಿದರು.

‘ಶನಿವಾರ ರಾತ್ರಿ ಜನಸಂದಣಿ ಕಡಿಮೆಯಾದ ನಂತರ ಕೆಲ ಮುಸಿಯಾಗಳು ಹಗ್ಗದ ಮೂಲಕ ದಡ ತಲುಪಿದ್ದವು. ಉಳಿದ ಮುಸಿಯಾಗಳು ದಂಡೆಗೆ ಬರಲು ಸಾಧ್ಯವಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಮರಗಳ ನಡುವೆ ಸಂಪರ್ಕಕ್ಕೆ ಬಲೆ ಹಾಗೂ ಏಣಿಯನ್ನು ನಿರ್ಮಿಸಲಾಯಿತು. ಜನರನ್ನು ದೂರ ಕಳುಹಿಸಿದ ನಂತರ, ಮುಸಿಯಾಗಳು ದಂಡೆಗೆ ಸುರಕ್ಷಿತವಾಗಿ ತಲುಪಿದವು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ತಿಳಿಸಿದರು.

ಅರಣ್ಯ ಇಲಾಖೆ ಡಿಆರ್‌ಎಫ್‌ಒ ಹಿದಾಯತ್‌ ಉಲ್ಲಾ, ‘ಜನರ ಸಂಪರ್ಕವಿಲ್ಲದೇ ಕಾಡಿನಲ್ಲಿ ವಾಸವಾಗಿದ್ದ ಮುಸಿಯಾಗಳು ಭಯ ಹಾಗೂ ಹಸಿವಿನಿಂದ ನಿತ್ರಾಣಗೊಂಡಿದ್ದವು. ಅವುಗಳ ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು. ಅಗ್ನಿಶಾಮಕ ದಳ, ಮೀನುಗಾರರು ಹಾಗೂ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.