ADVERTISEMENT

ಆಂಧ್ರದಿಂದ ಗಾಂಜಾ ಪೂರೈಕೆ: 5 ಜನರ ಬಂಧನ

ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 13:25 IST
Last Updated 10 ಸೆಪ್ಟೆಂಬರ್ 2020, 13:25 IST
   

ದಾವಣಗೆರೆ: ಆಂಧ್ರಪ್ರದೇಶದಿಂದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರಿಂದ 5 ಕೆ.ಜಿ. 250 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟಕ್ಕೆ ಬಳಸುತ್ತಿದ್ದ ಒಂದು ಇನೊವಾ ಕಾರು ಸೇರಿ ₹ 10.26 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಶಫೀರ್ ಖಾನ್‌, ಜಬೀವುಲ್ಲಾ, ಪತ್ಹಾಖಾನ್‌, ಶಿವಮೊಗ್ಗ ಜಿಲ್ಲೆಯ ಆಯನೂರಿನ ತೌಸಿಫ್‌ ಖಾನ್‌, ದಾವಣಗೆರೆ ತಿಮ್ಮಪ್ಪನ ಕ್ಯಾಂಪ್‌ನ ಚಂದ್ರಶೇಖರ್‌ ಬಂಧಿತರು. ಗಾಂಜಾ ಅಕ್ರಮ ಮಾರಾಟಕ್ಕೆ ಆಂಧ್ರಪ್ರದೇಶದ ಸಂಪರ್ಕ ಇರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ADVERTISEMENT

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ‘ಐದು ಆರೋಪಿಗಳಲ್ಲಿ ಒಬ್ಬನ ಸಂಬಂಧಿ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ರಾಜಮಂಡ್ರಿ ತಾಲ್ಲೂಕಿನವರು. ಹಾಗಾಗಿ ಅಲ್ಲಿಂದ ಗಾಂಜಾವನ್ನು ತಂದು ದಾವಣಗೆರೆ ಹಾಗೂ ಪಕ್ಕದಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಸೇವನೆ ಮಾಡಲು ಯೋಗ್ಯವಾದ ಸಂಸ್ಕರಿತ ಗಾಂಜಾವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು’ ಎಂದು ತಿಳಿಸಿದರು.

‘ಸಂಸ್ಕರಿತ ಗಾಂಜಾ ಆದ ಕಾರಣ ವಿದ್ಯಾರ್ಥಿಗಳು ಸೇರಿ ಸೇವನೆ ಅಭ್ಯಾಸವಿದ್ದವರಿಗೆ ಮಾರಾಟ ಮಾಡುತ್ತಿದ್ದರು. ಈ ಮೂರು ಜಿಲ್ಲೆ ಅಲ್ಲದೇ ಇತರೆ ಜಿಲ್ಲೆಗಳಿಗೂ ಗಾಂಜಾ ಪೂರೈಸುತ್ತಿದ್ದನ್ನು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದು, ಹೆಚ್ಚಿನ ತನಿಖೆಗೆ ತಂಡ ರಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.