ADVERTISEMENT

ಶಸ್ತ್ರಚಿಕಿತ್ಸೆ: ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ

ಶವವನ್ನು ಗುರುನಾಥ ಆಸ್ಪತ್ರೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ ಸಂಬಂಧಿಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:23 IST
Last Updated 1 ಜುಲೈ 2022, 2:23 IST
ದಾವಣಗೆರೆಯಲ್ಲಿ ಮೃತಪಟ್ಟಿರುವ ಅನ್ನಪೂರ್ಣಮ್ಮ ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ರೋದಿಸಿದರು
ದಾವಣಗೆರೆಯಲ್ಲಿ ಮೃತಪಟ್ಟಿರುವ ಅನ್ನಪೂರ್ಣಮ್ಮ ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ರೋದಿಸಿದರು   

ದಾವಣಗೆರೆ: ಶಸ್ತ್ರ ಚಿಕಿತ್ಸೆ ನಂತರ ಹೊಲಿಗೆ ಹಾಕದ್ದರಿಂದ ರೋಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ಸಂಬಂಧಿಗಳು, ಶವವನ್ನು ಆಸ್ಪತ್ರೆಯ ಮುಂದೆ ಇರಿಸಿ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಗುರುನಾಥ ಆಸ್ಪತ್ರೆ ಎದುರು ಗುರುವಾರ ನಡೆದಿದೆ.

ಹೊಟ್ಟೆಯ ಒಳಗೆ ಗಡ್ಡೆಯಾಗಿ ಕೊಳೆತಿರುವುದರಿಂದ ಹೊಲಿಗೆ ಹಾಕಲು ಬರುವುದಿಲ್ಲ. ನಿಧಾನಕ್ಕೆ ಗಾಯ ಮಾಯುವ ಮೂಲಕ ಚರ್ಮ ಸೇರಿಕೊಳ್ಳಬೇಕು. ಹಾಗಾಗಿ ಹೊಲಿಗೆ ಹಾಕಿರಲಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಬಸವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರದ ನಿವಾಸಿಯಾದ ಅನ್ನಪೂರ್ಣಮ್ಮ ರೇವಣಸಿದ್ದಯ್ಯ (65) ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್‌ ನಂತರ ಹೊಟ್ಟೆಯಲ್ಲಿ ಗಡ್ಡೆ ಇರುವುದಾಗಿ ಹೇಳಿದ್ದ ಡಾ. ದೀಪಕ್‌ ಬೊಂದಾದೆ, ಶಸ್ತ್ರ ಚಿಕಿತ್ಸೆ ಮೂಲಕ ಗಡ್ಡೆ ಹೊರತೆಗೆಯಬೇಕು ಎಂದು ತಿಳಿಸಿದ್ದರು.

ADVERTISEMENT

ನಂತರ ಜೂನ್‌ 13ರಂದು ಅನ್ನಪೂರ್ಣಮ್ಮ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹೊಟ್ಟೆ ಕೊಯ್ದ ಆ ಭಾಗವನ್ನು ಹೊಲಿಯದೇ ಹಾಗೇ ಬಿಟ್ಟಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಯ ಕೂಡುತ್ತದೆ ಎಂದು ವೈದ್ಯರು ಉತ್ತರಿಸಿದ್ದರು ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಶಸ್ತ್ರಚಿಕಿತ್ಸೆ ನಂತರ ರೋಗಿಯ ಸ್ಥಿತಿ ಗಂಭೀರವಾಗುತ್ತಿದ್ದರೂ ವೈದ್ಯರು ಕಾಳಜಿ ವಹಿಸುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿ, ಅನ್ನಪೂರ್ಣಮ್ಮ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಈ ಕುರಿತು ಬಸವನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಗುರುವಾರ ಅನ್ನಪೂರ್ಣಮ್ಮ ಮೃತಪಟ್ಟ ಹಿನ್ನೆಲೆಯಲ್ಲಿ ಸಂಬಂಧಿಗಳು ಆಕ್ರೋಶದಿಂದ ಪ್ರತಿಭಟನೆ ನಡೆಸಿದರು.

‘ಶಸ್ತ್ರ ಚಿಕಿತ್ಸೆಯ ಬಳಿಕ ಅವರು ಊಟ ಮಾಡುವುದನ್ನು ನಿಲ್ಲಿಸಿದ್ದರು. ಮಿದುಳು ಸಹಿತ ವಿವಿಧ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ವೈದ್ಯರು, ಸಿಬ್ಬಂದಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಸೀದಿ ನೀಡದೇ
₹ 3 ಲಕ್ಷ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ಈ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರೇ ಹೊಣೆ’ ಎಂದು ಅನ್ನಪೂರ್ಣಮ್ಮ ಅವರ ಪುತ್ರಿ ನಳಿನಾ, ಅಳಿಯ ಸ್ವಾಮಿ ಆರೋಪಿಸಿದರು.

ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆ ವಿಕೋಪಕ್ಕೆ ಹೋಗದಂತೆ ತಡೆದರು. ‘ಈ ಬಗ್ಗೆ ಪ್ರಕರಣ ದಾಖಲಾಗಿದೆ. ನಾವು ವೈದ್ಯಕೀಯ ಮಂಡಳಿಯಿಂದ ವರದಿ ಕೇಳಿದ್ದೇವೆ. ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಸವನಗರ ಪೊಲೀಸ್‌ ಠಾಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೆಕ್ರೊಟೈಸಿಂಗ್‌ ಫೇಸೈಟೀಸ್‌ ಸಮಸ್ಯೆ: ಡಿಎಚ್‌ಒ ಡಾ. ನಾಗರಾಜ

‘ನಾನು ಗುರುನಾಥ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅಲ್ಲಿಯ ವೈದ್ಯರು ಹೇಳುವ ಪ್ರಕಾರ ಅದು ನೆಕ್ರೊಟೈಸಿಂಗ್‌ ಫೇಸೈಟೀಸ್‌ ಸಮಸ್ಯೆ. ಅಂದರೆ, ಹೊಟ್ಟೆಯೊಳಗೆ ಗೆಡ್ಡೆಯಾಗಿ ಅಥವಾ ಬೇರೆ ಕಾರಣದಿಂದ ಕೊಳೆಯುವುದು. ಅಂಥ ಸಂದರ್ಭದಲ್ಲಿ ಗೆಡ್ಡೆ ತೆಗೆಯಲು ಶಸ್ತ್ರ ಚಿಕಿತ್ಸೆ ನಡೆಸಿದ ಮೇಲೆ ಹೊಲಿಗೆ ಹಾಕಿದರೆ ಹೊಲಿಗೆ ನಿಲ್ಲುವುದಿಲ್ಲ. ಗಾಯ ನಿಧಾನಕ್ಕೆ ಕೂಡುತ್ತಾ ಬರಬೇಕು. ಅದನ್ನೇ ಪ‍್ರತಿಭಟನಕಾರರಿಗೂ ತಿಳಿಸಿದ್ದೇನೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನ್ನಪೂರ್ಣಮ್ಮ ಆಸ್ಪತ್ರೆಗೆ ದಾಖಲಾಗಿದ್ದಲ್ಲಿಂದ ಇಲ್ಲಿವರೆಗಿನ ಎಲ್ಲ ವರದಿಗಳಿರುವ ಕೆ ಶೀಟ್‌ ನೀಡಲು ತಿಳಿಸಿದ್ದೇನೆ. ಕೆ ಶೀಟ್‌ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.