ADVERTISEMENT

ಜಗಳೂರು: ತಹಶೀಲ್ದಾರ್ ನಾಗವೇಣಿಗೆ ಸೀಮಂತ

ಉಡಿ ತುಂಬಿ ಶುಭ ಹಾರೈಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 11:55 IST
Last Updated 2 ಸೆಪ್ಟೆಂಬರ್ 2021, 11:55 IST
ಜಗಳೂರಿನಲ್ಲಿ ಬುಧವಾರ ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು.
ಜಗಳೂರಿನಲ್ಲಿ ಬುಧವಾರ ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು.   

ಜಗಳೂರು: ತಹಶೀಲ್ದಾರ್ ಡಾ. ನಾಗವೇಣಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಸೀಮಂತ ಕಾರ್ಯ ನೆರವೇರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪೋಷಣ್ ಅಭಿಯಾನ’ ಮಾಸಾಚರಣೆಯಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಕಾರ್ಯಕರ್ತೆಯರು ಹಾಗೂ ಆಯುಷ್ ವೈದ್ಯರು ಹೂ, ಹಣ್ಣು, ಸೀರೆ, ರವಿಕೆ, ಎಲೆ, ಅಡಿಕೆ, ಅರಿಶಿಣಗಳಿಂದ ಆತ್ಮೀಯವಾಗಿ ತಹಶೀಲ್ದಾರ್ ಅವರ ಉಡಿ ತುಂಬಿದರು.

ಅರಿಶಿಣ ಹಾಗೂ ಕುಂಕುಮ ಹಚ್ಚಿ ಭಾವನಾತ್ಮಕವಾಗಿ ಸೀಮಂತ ಮಾಡಲಾಯಿತು. ಸರ್ಕಾರಿ ಕಾರ್ಯಕ್ರಮವಾದರೂ ಕುಟುಂಬದ ಸದಸ್ಯರಂತೆ ಆಪ್ತತೆಯಿಂದ ಉಡಿ ತುಂಬಿದ್ದು, ತಹಶೀಲ್ದಾರ್ ನಾಗವೇಣಿ ಅವರನ್ನು ಭಾವುಕರನ್ನಾಗಿಸಿತು.

ADVERTISEMENT

ಡಾ. ನಾಗವೇಣಿ ಮಾತನಾಡಿ, ‘ಸೀಮಂತ ಕಾರ್ಯ ನನಗೆ ಸಂತಸ ತಂದಿದೆ. ಅಂಗನವಾಡಿ ಕಾರ್ಯರ್ತೆ ಯರು, ಮೇಲ್ವಿಚಾರಕರು ಸುರಕ್ಷತೆ ಕಾಪಾಡಿಕೊಳ್ಳುವ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪೋಷಣ್ ಅಭಿಯಾನ ಮಾಸಾಚರಣೆ: ‘ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ಸ್ಥಳೀಯವಾಗಿ ಲಭ್ಯವಾಗುವ ಸೊಪ್ಪು ಮತ್ತು ತರಕಾರಿಗಳ ಪೌಷ್ಟಿಕ ಆಹಾರ ನೀಡಬೇಕು’ ಎಂದು ನಾಗವೇಣಿ ಸಲಹೆ ನೀಡಿದರು.

‘ಸರ್ವ ಕಾಯಿಲೆಗಳ ನಿವಾರಣೆಗೆ ಆಹಾರವೇ ಔಷಧಿಯಾಗಬೇಕು. ಗರ್ಭಿಣಿ, ಬಾಣಂತಿಯರು
ಕಬ್ಬಿಣಾಂಶಯುಕ್ತ ಆಹಾರ
ಪದಾರ್ಥಗಳನ್ನು ಪೂರೈಸಿದರೆ ಅಪೌಷ್ಟಿಕತೆ ತೊಲಗಿಸಬಹುದು. ಅಲ್ಲದೆ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಬೇಕು’ ಎಂದರು.

ಸಿಡಿಪಿಒ ಬಿರೇಂದ್ರ ಮಾತನಾಡಿ, ‘ಪೋಷಣ್ ಅಭಿಯಾನ 2018ರಲ್ಲಿ ಆರಂಭವಾಗಿದ್ದು, ಸೆಪ್ಟೆಂಬರ್‌ 30‌ರವರೆಗೆ ಅಭಿಯಾನ ನಡೆಯಲಿದ್ದು, ಮಾತೃವಂದನಾ ಕಾರ್ಯಕ್ರಮದಲ್ಲಿ ಸಿಗಬಹುದಾದ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಬೇಕು’ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಾಗರಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಮೇಲ್ವಿಚಾರಕಿಯರಾದ ಶಾಂತಮ್ಮ, ಟಿ. ಶಾಂತಮ್ಮ, ಅನುರಾಧ, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.