ADVERTISEMENT

ದಾವಣಗೆರೆ: ಮಾನವತೆಯ ಮಹೋತ್ಸವ, ಜನಮುಖಿಯ ಜಾಗತಿಕ ಹಬ್ಬ

ಫೆ.1ರಿಂದ 9ರವರೆಗೆ ಹಳೇಬೀಡಿನಲ್ಲಿ ತರಳಬಾಳು ಹುಣ್ಣಿಮೆ

ಎಲ್.ಜಿ.ಮಧುಕುಮಾರ್
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ದಾವಣಗೆರೆ: ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಧಾರ್ಮಿಕ ಮೌಢ್ಯ, ಸಾಮಾಜಿಕ ಅಸಮಾನತೆ ನಿವಾರಣೆಗಾಗಿ ಹುಟ್ಟಿಕೊಂಡಿದೆ. ಸ್ವಾಭಿಮಾನ, ಸದೃಢತೆಯಿಂದ ತಲೆಎತ್ತಿ ಇಂದು ವಿಶ್ವ ಮಾನ್ಯತೆ ಪಡೆದಿದೆ. ಧಾರ್ಮಿಕ ಕ್ಷೇತ್ರದ ಜತೆಗೆ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಇದು ಹೊಂದಿದೆ.

ಶ್ರೀಮಠದಿಂದ ಹತ್ತು ಹಲವು ಸಮಾಜಮುಖಿ ಉತ್ಸವಗಳು ನಡೆಯುತ್ತಲೇ ಇವೆ. ಅಂತಹ ಉತ್ಸವಗಳಲ್ಲಿ ಪ್ರಮುಖವಾದದ್ದು ತರಳಬಾಳು ಹುಣ್ಣಿಮೆ ಉತ್ಸವ. ನಾಡಿನ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಪ್ರತಿ ವರ್ಷವೂ ಮಾನವೀಯತೆಯ ಅನನ್ಯತೆಯನ್ನು ಸಾರುವ ಮಹೋತ್ಸವವಾಗಿ 69 ವರ್ಷಗಳಿಂದ ಸರ್ವಜನಾದರಣೆಯನ್ನು ಗಳಿಸಿದೆ.

ಈ ಹುಣ್ಣಿಮೆ ಮಹೋತ್ಸವವು ಧರ್ಮ, ಸಾಹಿತ್ಯ, ಸಂಸ್ಕೃತಿ ಇವುಗಳ ತ್ರಿವೇಣಿ ಸಂಗಮವಾಗಿದೆ. ಯಾವುದೇ ಧರ್ಮ ಜಾತಿಗಳ ಚೌಕಟ್ಟಿಗೆ ಒಳಪಡದೆ ಅಖಿಲ ಮಾನವತೆಯ ತತ್ವದಡಿಯಲ್ಲಿ ಸರ್ವರನ್ನು ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಜನಮುಖಿ ಜಾಗತಿಕ ಹಬ್ಬವಾಗಿದೆ.

ADVERTISEMENT

ಹುಣ್ಣಿಮೆಯ ಚಾರಿತ್ರಿಕೆ ಹಿನ್ನೆಲೆ: 12ನೇ ಶತಮಾನದಲ್ಲಿ ಈಗಿನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಉಜ್ಜಿಯಿನಿಯಲ್ಲಿ ಸದ್ಧರ್ಮ ಪೀಠವೊಂದು ಉದಯಿಸಿತು. ಅದರ ಪ್ರವರ್ತಕರು ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತಾರತಮ್ಯ ಭಾವವಿಲ್ಲದೆ ನವಸಮಾಜವನ್ನು ನಿರ್ಮಿಸಿ, ಸದ್ಧರ್ಮ ಪೀಠವನ್ನು ಸ್ಥಾಪಿಸಿದ ಕೀರ್ತಿ ಮರುಳಸಿದ್ಧರಿಗೆ ಸಲ್ಲುತ್ತದೆ. ಇವರ ಪ್ರೀತಿಯ ಶಿಷ್ಯನಾದ ತೆಲುಗುಬಾಳು ಸಿದ್ಧನಿಗೆ ಮಾಘ ಶುದ್ಧ ಪೂರ್ಣಿಮೆಯಂದು ಸದ್ಧರ್ಮ ಪೀಠದಲ್ಲಿ ಕುಳ್ಳಿರಿಸಿ ‘ತರಳ-ಬಾಳು’ ಎಂದು ಹರಸಿದರು. ‘ತರಳಬಾಳು’ ಎಂಬ ಈ ಪಂಚಾಕ್ಷರಿ ಮಂತ್ರದಲ್ಲಿ ಮಾನವ ಕುಲದ ಅಭ್ಯುದಯವೇ ಅಡಕವಾಗಿದೆ. ಈ ಚಾರಿತ್ರಿಕ ಘಟನೆಯು ಜರುಗಿದ ಸವಿನೆನಪಿಗಾಗಿ 9 ದಿನಗಳ ಕಾಲ ನಾಡಿನ ವಿವಿಧೆಡೆ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದು ಸಮಾಜಕ್ಕೆ ಬೆಳಕನ್ನು ನೀಡುತ್ತಲೇ ಬರುತ್ತಿದೆ.

ಭಾವೈಕ್ಯದ ಬೆಸುಗೆ: ಒಂಬತ್ತು ದಿನಗಳ ಕಾಲ ನಡೆಯುವ ಹುಣ್ಣಿಮೆ ಮಹೋತ್ಸವವು ಕೇವಲ ಜಾತ್ರೆಯಲ್ಲ, ಅದೊಂದು ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಯಾತ್ರೆಯಾಗಿರುತ್ತದೆ. ಜನರ ಅಜ್ಞಾನ, ಅಂಧ-ಶ್ರದ್ಧೆಗಳನ್ನು ಹೋಗಲಾಡಿಸುವ ಮನನಯೋಗ್ಯ ಮಾನಸಿಕ ಮಾತ್ರೆಯಾಗಿದೆ.

ಭಾವೈಕ್ಯದ ಬೆಸುಗೆಯಾಗಿ ಇಹಪರ ಬದುಕಿನ ಸಾರ್ಥಕತೆಗೆ ಕೈಗನ್ನಡಿಯಾಗಿ ಸಕಲರ ಬಾಳನ್ನು ಬೆಳಗುವಂತಹ ಕಾರ್ಯಕ್ರಮಗಳೇ ಈ ತರಳಬಾಳು ಹುಣ್ಣಿಮೆಯ ವೈಶಿಷ್ಟ್ಯ.

ಹುಣ್ಣಿಮೆಯ ರೂವಾರಿ ಲಿಂಗೈಕ್ಯ ಶ್ರೀ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಹರಿದು ಹಂಚಿಹೋಗಿದ್ದ ಸಮಾಜವನ್ನು ಸಂಘಟಿಸಿ ಸಹಸ್ರಾರು ಕುಟುಂಬಗಳಿಗೆ ನಿರ್ದಿಷ್ಟ ಗುರಿಯನ್ನು ತೋರಿಸಿ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಟ್ಟರು. ಜಾತಿಯ ಸಂಕುಚಿತ ಮನೋಭಾವದಿಂದ ಹೊರಬಂದು ಮಾನವ ಮಾತ್ರರಾದವರೆಲ್ಲರಿಗೂ ಕರುಣಾಮೃತ ಧಾರೆಎರೆದರು. ಶಿವಕುಮಾರ ಸ್ವಾಮೀಜಿ ಸರ್ವಶರಣರ ಸಮ್ಮೇಳನ, ಶಿವಾನುಭವ ಪ್ರವಾಸ, ತರಳಬಾಳು ಹುಣ್ಣಿಮೆ ಮುಂತಾದವುಗಳ ಮೂಲಕ ಲೋಕಶಿಕ್ಷಣ ನೀಡಿ ಜನರ ಸಾಂಸ್ಕೃತಿಕ ಬದುಕಿಗೆ ಭದ್ರವಾದ ನೆಲೆಗಟ್ಟು ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಪ್ರಥಮವಾಗಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮವನ್ನು 1950ರಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆಸುವ ಮೂಲಕ ಸರ್ವಧರ್ಮ ಸಮನ್ವಯತೆಗೆ ನಾಂದಿ ಹಾಡಿದ್ದರು.

ಆಧುನಿಕ ಭಗೀರಥ ತರಳಬಾಳುಶ್ರೀ: ಹಳೇಬೀಡಿನಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿಯೇ ತರಳಬಾಳು ಹುಣ್ಣಿಮೆ ಉತ್ಸವ ನಡೆಯಬೇಕಾಗಿತ್ತು. ಆದರೆ, ಆಗ ಆ ಭಾಗದಲ್ಲಿ ಜನ-ಜಾನುವಾರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ ರಣಘಟ್ಟ ನೀರಾವರಿ ಯೋಜನೆಗೆ ಚಾಲನೆ ಕೊಡಿಸಿ, ಹಳೇಬೀಡಿನ ಕೆರೆಗೆ ನೀರು ತುಂಬಿಸಿದ ಮೇಲೆಯೇ ಈ ಮಹೋತ್ಸವವನ್ನು ಆಚರಿಸಬೇಕು ಎಂದು ನಿರ್ಧರಿಸಿ ಎರಡು ವರ್ಷಗಳಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಗೆ ತಾತ್ವಿಕ ಒಪ್ಪಿಗೆ ದೊರೆಯುವಂತೆ ಮಾಡಿದ್ದಾರೆ. ಶ್ರೀಗಳು ರೈತರ ಮೇಲೆ ಇಟ್ಟಿರುವ ಕಾಳಜಿಗೆ ಈ ಭಾಗದ ಜನ ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ಪೌರ್ಣಮಿಯ ಬೆಳದಿಂಗಳಿಗೆ ಯಾವ ಪರಿಮಿತಿಯೂ ಇಲ್ಲ. ಭೇದ–ಭಾವವಿಲ್ಲದೆ ಅದರ ತಂಬೆಳಕು ಎಲ್ಲರ ಮನಸ್ಸಿಗೆ ಮುದ ನೀಡುತ್ತಾ ಬಂದಿದೆ. ನಾಡಿನ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಇದೊಂದು ಕಾಣಿಕೆ. ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ಧರ್ಮ, ಅಧ್ಯಾತ್ಮ, ಸಂಸ್ಕೃತಿ ಇವೆಲ್ಲವುಗಳ ಸಮನ್ವಯ ಹಾಗೂ ಸದ್ಬಳಕೆಗೆ ಹಳೇಬೀಡಿನಲ್ಲಿ ಫೆಬ್ರುವರಿ 1ರಿಂದ 9ರವರೆಗೆ ನಡೆಯುವ ತರಳಬಾಳು ಹುಣ್ಣಿಮೆ ದಾರಿ ದೀಪವಾಗಿದೆ.

ಲೇಖಕರು: ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.