ADVERTISEMENT

ಜಾತಿ ಗಣತಿಯ ಅಧಿಕಾರ ರಾಜ್ಯಕ್ಕಿಲ್ಲ: ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 12:33 IST
Last Updated 1 ಜುಲೈ 2025, 12:33 IST
ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ
ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ   

ದಾವಣಗೆರೆ: ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಅಲ್ಲ. ರಾಜಕೀಯ ಹಿತಾಸಕ್ತಿಗೆ ವೀರಶೈವ ಲಿಂಗಾಯತ ಧರ್ಮದ ಒಳಪಂಗಡಗಳನ್ನು ಛಿದ್ರಗೊಳಿಸಿ ಗೊಂದಲ ಸೃಷ್ಟಿಸುವುದಕ್ಕೆ ಪಂಚಪೀಠಗಳು ಅವಕಾಶ ನೀಡುವುದಿಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

‘ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಮರುಗಳಿಗೆಯಲ್ಲಿ ರಾಜ್ಯ ಸರ್ಕಾರ ಕೂಡ ಜಾತಿಗಣತಿಯ ಜೊತೆಗೆ ಸಾಮಾಜಿಕ ಸಮೀಕ್ಷೆ ಕೈಗೊಳ್ಳಲು ಮತ್ತೊಮ್ಮೆ ಮುಂದಾಗಿದೆ. ಜನರ ದಾರಿ ತಪ್ಪಿಸುವ ಈ ಪ್ರಯತ್ನವನ್ನು ವಿರೋಧಿಸುತ್ತೇವೆ’ ಎಂದು ಸೋಮವಾರ ಪಂಚಪೀಠಾಧೀಶರ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಇಸ್ಲಾಂ ಧರ್ಮದಲ್ಲಿ ಹಲವು ಒಳಪಂಗಡಗಳಿವೆ. ಜಾತಿ ಗಣತಿಯಲ್ಲಿ ಎಲ್ಲ ಒಳಪಂಗಡಗಳನ್ನು ಮುಸ್ಲಿಂ ಎಂದೇ ಗುರುತಿಸಲಾಗುತ್ತಿದೆ. ಇದೇ ರೀತಿ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಬದಿಗಿಟ್ಟು ಒಂದಾಗಿ ನೋಡುವ ಅಗತ್ಯವಿದೆ. ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಕೈಗೊಳ್ಳುತ್ತಿರುವ ಜಾತಿ ಗಣತಿ ಸ್ವಾಗತಾರ್ಹ ನಡೆ’ ಎಂದರು.

ADVERTISEMENT

ಉಜ್ಜಯಿನಿ ಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಜರಿದ್ದರು.

‘ ಜುಲೈ 21, 22ಕ್ಕೆ ಶೃಂಗ’
ಕವಲು ದಾರಿಯಲ್ಲಿ ಸಾಗುತ್ತಿರುವ ವೀರಶೈವ ಲಿಂಗಾಯತ ಧರ್ಮವನ್ನು ಒಗ್ಗೂಡಿಸುವ ಉದ್ದೇಶದಿಂದ ವೀರಶೈವ ಪೀಠಾಚಾರ್ಯ ಮತ್ತು ಶಿವಾಚಾರ್ಯರರ ಶೃಂಗವನ್ನು ಜುಲೈ 21 ಮತ್ತು 22ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

‘ತಪ್ಪು ಕಲ್ಪನೆಯಿಂದ ವೀರಶೈವ ಪಂಚಪೀಠಗಳಲ್ಲಿ ಗೊಂದಲ, ಆಂತರಿಕ ಸಮಸ್ಯೆಗಳು ಒಂದೂವರೆ ದಶಕದಿಂದ ತಲೆದೋರಿವೆ. ವೀರಶೈವ ಲಿಂಗಾಯತ ಧರ್ಮ ಉಪ ಜಾತಿಗಳಾಗಿ ಹಂಚಿ ಹೋಗುತ್ತಿದೆ. ಧರ್ಮದ ಒಳಗಿನ ಭಿನ್ನ ಚಟುವಟಿಕೆಗೆ ಕಡಿವಾಣ ಹಾಕಿ, ಧಾರ್ಮಿಕ ಪುನಃಶ್ಚೇತನಕ್ಕೆ ಪಂಚಪೀಠಗಳು ದೃಢವಾದ ಹೆಜ್ಜೆ ಇಟ್ಟಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.