ಹರಪನಹಳ್ಳಿ:ಹರಪನಹಳ್ಳಿ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು ಮತ್ತು ಪೋಷಕರ ಪರಸ್ಪರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳು ಸ್ಮಾರ್ಟ್ ಆಗುತ್ತಿವೆ. ತಾಲ್ಲೂಕಿನ 5 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ಮಾರ್ಗದರ್ಶನದಲ್ಲಿ ಶಾಲಾಭಿವೃದ್ಧಿಗಾಗಿ ವಿನೂತನಜೋಳಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಇದರಿಂದರಾಗಿಮಸಲವಾಡ, ಅಳಗಂಚಿಕೇರಿ, ಕಡಬಗೇರಿ, ಪೋತಲಕಟ್ಟೆ, ಇಟ್ಟಿಗುಡಿ ಗ್ರಾಮದಲ್ಲಿ ಸಂಗ್ರಹವಾದ ದೇಣಿಗೆಯಿಂದ ಸ್ಮಾರ್ಟ್ ಕ್ಲಾಸ್ ರೂಪಿಸಲಾಗಿದೆ. ತಾವರಗುಂದಿಯಲ್ಲಿ ಕಂಪ್ಯೂಟರ್, ಪ್ರಿಂಟಿಂಗ್, ಕುರುಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಹಚ್ಚಲಾಗಿದೆ. ಕೆಲ ಶಾಲೆಗಳಲ್ಲಿ ಆಟೋಪಕರಣ, ಗ್ರಂಥಾಲಯ ಸ್ಥಾಪಿಸಿ ಉತ್ತಮ ಪುಸ್ತಕಗಳನ್ನು ನೀಡಲಾಗಿದೆ.
ಸೋರುತ್ತಿದ್ದ ಶಾಲೆಗಳನ್ನು ಗುರುತಿಸಿದ ಶಿಕ್ಷಣ ಇಲಾಖೆ, ಕಳೆದ ವರ್ಷದ ಜೋಳಿಗೆ ಕಾರ್ಯಕ್ರಮ ರೂಪಿಸಿತು. ಪ್ರತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿ, ಗ್ರಾಮದ ತುಂಬೆಲ್ಲಾ ಜೋಳಿಗೆ ಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರು ಮೆರವಣಿಗೆ ಮಾಡಿದರು.
ಹಿಡಿದ ಜೋಳಿಗೆಗೆ ಅಲ್ಲಿನ ಗ್ರಾಮಸ್ಥರು ಕಾಣಿಕೆ ರೂಪದಲ್ಲಿ, ಪುಸ್ತಕ, ದೇಣಿಗೆ, ಟಿ.ವಿ. ಇತರೆ ವಸ್ತುಗಳನ್ನು ಜೋಳಿಗೆಗೆ ಹಾಕಿದರು. ಅದನ್ನೆಲ್ಲಾ ಕ್ರೋಢೀಕರಿಸಿ, ಶಿಕ್ಷಕರು ಮತ್ತು ಪೋಷಕರನ್ನು ಒಳಗೊಂಡು ಸಮಿತಿ ರಚಿಸಲಾಯಿತು. ಇದರಿಂದ ಸಂಗ್ರಹವಾದ ಹಣದಲ್ಲಿ ಆ ಶಾಲೆಗಳಿಗೆ ಗುಣಮಟ್ಟದ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ.
ಕೊಟ್ಟೂರು ರಸ್ತೆಯಲ್ಲಿರುವ ಆಶ್ರಯ ಕ್ಯಾಂಪ್ ಶಾಲಾ ಕಾಂಪೌಂಡ್‌ಗೆ ಚಿತ್ತಾರ, ಸರ್ಕಾರಿ ಪ್ರೌಢಶಾಲೆ (ಜೂನಿಯರ್ ಕಾಲೇಜು), ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕಾಯಕದಹಳ್ಳಿ, ಬಾಣಗೇರೆ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿ ವಿವಿಧ ಶಾಲೆಗಳು ಪಾಲಕರ ಸಹಕಾರದಿಂದ ಅಭಿವೃದ್ಧಿಯಾಗುತ್ತಿವೆ.
ಶಿಕ್ಷಕರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ದಿ: 1922ರಲ್ಲಿ ಆರಂಭವಾಗಿರುವ ಮೇಗಳಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 2022ಕ್ಕೆ ಶತಮಾನೋತ್ಸವ ಆಚರಿಸಲಿದೆ. ಈ ಶಾಲೆ ಅಭಿವೃದ್ಧಿಗೆ ದಾನಿಗಳ ನೆರವು ಪಡೆದು, ಸ್ವತಃ ಶಿಕ್ಷಕರೇ ಸ್ವಂತ ಹಣದಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಂಡಿದ್ದಾರೆ.
ಶಾಲೆಯಲ್ಲಿ ನೀರಿನ ನಲ್ಲಿ ಹಾಕಿಸಲು ಶಿಕ್ಷಕಿಯರಾದ ಸುಮತಿ, ಎಚ್.ಶೈಲಾ, ಎಚ್.ಎಂ. ವಿಜಯಕುಮಾರಿ, ಶಾಲಾ ಮುಖ್ಯಶಿಕ್ಷಕರ ಕೊಠಡಿ ಅಲಂಕಾರಕ್ಕೆ ಎಸ್.ಕೊಟ್ರಮ್ಮ, ಕುರ್ಚಿಗಳನ್ನು ಖರೀದಿಸಲು ಶಿಕ್ಷಕರಾದ ಎಚ್.ಎಸ್.ಬಸವರಾಜ್, ಪಿ.ಅಂಜಿನಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಸಲು ಎಂ.ರತ್ನಮ್ಮ, ರಾಷ್ಟ್ರ ನಾಯಕರ ಭಾವಚಿತ್ರ ಮಧು ಟೆಕ್ಸಟೈಲ್, ಸುಜಾತ ಅಟವಾಳಗಿ, ಶಕುಂತಲಾ, ಸಾವಿತ್ರಮ್ಮ, ಎಂ.ಬಿ.ಮಂಜುಳಾ, ಕೊಠಡಿಗಳಿಗೆ ಬಣ್ಣ ಹಚ್ಚಲು ಪಿ.ನಾಗರತ್ನಮ್ಮ, ಎಂ.ಕೊಟ್ರಮ್ಮ, ಬಿ.ಕೊಟ್ರೇಶ್, ಥಾವರ‍್ಯಾನಾಯ್ಕ, ಉಮಾದೇವಿ, ಹನುಮಕ್ಕ ದೇಣಿಗೆ ನೀಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
2022ರ ಜನವರಿಗೆ ಶಾಲೆ ಸ್ಥಾಪನೆಯಾಗಿ 100 ವರ್ಷ ಪೂರೈಸಲಿದೆ. ಶಾಲೆ ಅಭಿವೃದ್ಧಿ ಕಾಣುತ್ತಿರುವುದು ಸಂತಸ ತಂದಿದೆ. ಈ ವರ್ಷ ಒಂದನೇ ತರಗತಿಗೆ 102 ದಾಖಲಾತಿ ಹೊಂದಿ, ಒಟ್ಟು 530 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಎಚ್.ಸಲೀಂ ಹೇಳಿದರು.
ಪುಸ್ತಕ ಜೋಳಿಗೆ ಕಾರ್ಯಕ್ರಮ 8 ಶಾಲೆಗಳಲ್ಲಿ ನಡೆಸಿದ್ದೆವು. ಆ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಉತ್ತಮ ಸ್ಪಂದನ ದೊರೆತಿದೆ. ಸ್ಮಾರ್ಟ್ ಕ್ಲಾಸ್ ಇತರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರಿ ಆಗಿದೆ. ಸರ್ಕಾರಿ ಶಾಲೆ ಸುಧಾರಣೆಗೆ ಮತ್ತೆ ಜೋಳಿಗೆ ಪುನರ್ ಆರಂಭಿಸುವ ಬಗ್ಗೆ ಚಿಂತಿಸಲಾಗುತ್ತಿದೆ.
-ಎಸ್.ಎಂ.ವೀರಭದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.