ADVERTISEMENT

ಶಿಕ್ಷಕರ ಸಮಸ್ಯೆ ನೀಗದಿದ್ದರೆ ಸಮಾಜದ ಬೆಳವಣಿಗೆ ಕುಂಠಿತ

ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಕಾರ್ಯಾಗಾರದಲ್ಲಿ ಎಂ.ಎಲ್‌.ಸಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 19:20 IST
Last Updated 7 ಜನವರಿ 2019, 19:20 IST
ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಶಾಸಕ ಎಸ್‌.ಎ. ರವೀಂದ್ರನಾಥ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಶಾಸಕ ಎಸ್‌.ಎ. ರವೀಂದ್ರನಾಥ ಉದ್ಘಾಟಿಸಿದರು   

ದಾವಣಗೆರೆ: ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸದಿದ್ದರೆ ಸಮಾಜದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರ ಮನಸ್ಥಿತಿ ಚೆನ್ನಾಗಿದ್ದರೆ ಶಾಲೆ, ಸಮಾಜ ಹಾಗೂ ದೇಶವೂ ಚೆನ್ನಾಗಿರುತ್ತದೆ. ಶಿಕ್ಷಕ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಶಿಕ್ಷಕರನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಯಾವ ಶಾಲೆಯಲ್ಲಿ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಾರೆಯೋ, ಆ ಶಾಲೆಗೆ ಇಂದಿಗೂ ಬೇಡಿಕೆ ಇದೆ. ಶಿಕ್ಷಕರು ನೆಮ್ಮದಿಯಿಂದ ಶಾಲೆಗೆ ಬಂದು ಪಾಠ ಮಾಡುವ ವಾತಾವರಣವನ್ನು ನಿರ್ಮಿಸಬೇಕು’ ಎಂದು ಹೇಳಿದರು.

ADVERTISEMENT

ಸಮಾವೇಶ ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ, ‘ಶಿಕ್ಷಕರು ಇನ್ನೂ ಉತ್ತಮವಾಗಿ ಕೆಲಸ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಬೇಕು. ಸರ್ಕಾರಿ ಶಾಲೆಗಳೂ ನೂರಕ್ಕೆ ನೂರು ಫಲಿತಾಂಶ ಪಡೆದುಕೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.

ಆಶಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ. ಮಂಜುನಾಥ, ‘ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುವಂತೆ ಪ್ರೌಢಶಾಲೆ ಶಿಕ್ಷಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ, ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರ ಮಹತ್ವ ನೀಡುತ್ತಿಲ್ಲ. ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ವಿಫಲರಾಗಿರುವುದರಿಂದಲೇ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಕಡಿಮೆಯಾಗುತ್ತಿದೆ. ಇದೇ ರೀತಿ ಒತ್ತಡ ಹೆಚ್ಚಾದರೆ ರೈತರಂತೆ ಶಿಕ್ಷಕರ ಆತ್ಮಹತ್ಯೆ ಪ್ರಕರಣವೂ ಹೆಚ್ಚಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಒಂದು ಇನ್‌ಕ್ರಿಮೆಂಟ್‌ ಪಡೆಯಲು ಶಿಕ್ಷಕರು 30 ವರ್ಷ ಕಾಯುವಂತಾಗಿದೆ. ಸೇವಾ ಅವಧಿಯಲ್ಲಿ ಒಂದೂ ಬಡ್ತಿ ಸೌಭಾಗ್ಯವನ್ನು ಕಲ್ಪಿಸಿಲ್ಲ. ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಮಾರ್ಚ್‌ ಒಳಗೆ ಶಿಕ್ಷಕರ ವರ್ಗಾವಣೆ ಮಾಡಬೇಕು. ವೇತನ ಪರಿಷ್ಕರಣೆ, ಕಾಲ್ಪನಿಕ ವೇತನ ಸೇರಿ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಫಲಿತಾಂಶ ಸುಧಾರಣಾ ಕೈಪಿಡಿ’ ಕುರಿತು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ, ‘ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದಾವಣಗೆರೆ 10 ಸ್ಥಾನದೊಳಗೆ ಬರುವ ಗುರಿ ಇಟ್ಟುಕೊಳ್ಳಲಾಗಿದೆ. ಇದನ್ನು ಸಾಧಿಸಲು ನಾವೆಲ್ಲ ಪಣ ತೊಟ್ಟು, ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರೌಢಶಾಲೆ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು.

ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜು, ಶಿಕ್ಷಣಾಧಿಕಾರಿಗಳಾದ ಬಿ.ಎಂ. ನಿರಂಜನಮೂರ್ತಿ, ಬಿ.ಆರ್‌. ಬಸವರಾಜಪ್ಪ, ಸೋಮಶೇಖರ ಗೌಡ, ಬಿ.ಸಿ. ಸಿದ್ದಪ್ಪ, ಯುವರಾಜ ನಾಯ್ಕ, ಡಿ. ನರಸಿಂಹಪ್ಪ, ಉಷಾಕುಮಾರಿ, ಪುಷ್ಪಲತಾ, ಮಂಜುಳಾ, ಪಿ. ರಾಜೀವ್‌, ಮಹೇಶ್‌ ಪೂಜಾರ್‌, ಜೆಡಿಎಸ್‌ ಮುಖಂಡ ಹೊದಿಗೆರೆ ರಮೇಶ್‌, ಪ್ರೌಢಶಿಕ್ಷಣ ಮಂಡಳಿ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ಗಂಗಾಧರ ಸ್ವಾಮಿ ಹಾಜರಿದ್ದರು.

ಸಂಘದ ಕಾರ್ಯದರ್ಶಿ ಮುಬಾರಕ್‌ ಅಲಿ ಸ್ವಾಗತಿಸಿದರು. ಉಮಾ ಸಂಗಡಿಗರು ನಾಡಗೀತೆ ಹಾಡಿದರು.

‘ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತಿ’

ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತನೆ ಮಾಡಬೇಕು. ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಋಷಿಯಂತೆ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ದಾದಾಪೀರ್‌ ನವಿಲೇಹಾಳ್‌ ಕಿವಿಮಾತು ಹೇಳಿದರು.

ಶೈಕ್ಷಣಿಕ ಸಮಾವೇಶದಲ್ಲಿ ಉಪನ್ಯಾಸ ನೀಡಿದ ಅವರು, ‘ಮಕ್ಕಳು ಗ್ರಾಹಕರಲ್ಲ. ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡುವ ಜಡವಾದ ಸಾಂಸ್ಕೃತಿಕ ವಾತಾವರಣದಲ್ಲಿ ಪಠ್ಯ ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದಷ್ಟೇ ಗುರಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆಲೋಚನಾ ಕ್ರಮವನ್ನು ಕಲಿಸದ ಶಿಕ್ಷಣ ಯಶಸ್ವಿಯಾಗುವುದಿಲ್ಲ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಕೌಶಲವನ್ನೂ ಕಲಿಸಿ ಕೊಡಬೇಕು. ಮಕ್ಕಳ ಆಸಕ್ತಿಯ ಕೇಂದ್ರವನ್ನು ಅರಿತು, ಅವರ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ಮಾಡಬೇಕು. ಸಮಾಜದ ಉದಯಕ್ಕೆ ಬೆಳಗಲು ಬೇಕಾಗುವ ಪ್ರತಿಭೆಯನ್ನು ಕೊಡಬೇಕು ಎಂದು ಸಲಹೆ ನೀಡಿದರು.

ಯಾರು ಏನೆಂದರು?

* ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನಲ್ಲಿ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಹೋರಾಟ ನಡೆಸಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಲವು ಸಮಸ್ಯೆಗಳನ್ನು ಪರಿಹರಿಸಲಿವೆ ಎಂಬ ವಿಶ್ವಾಸವಿದೆ.

– ಆರ್‌. ಚೌಡರೆಡ್ಡಿ ತೂಪಲ್ಲಿ, ವಿಧಾನ ಪರಿಷತ್‌ ಸದಸ್ಯ

* ಶಿಕ್ಷಕರು ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಇದೆ. ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತರಕ್ಕೆ ಒಯ್ಯಬೇಕು. ಅದೇ ರೀತಿ ಸರ್ಕಾರವೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬರೆಹರಿಸುವ ಕೆಲಸ ಮಾಡಬೇಕು.

– ರಮೇಶ್‌ ಬಾಬು, ವಿಧಾನ ಪರಿಷತ್‌ ಮಾಜಿ ಸದಸ್ಯ

* ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸುತ್ತೋಲೆಗಳನ್ನು ಕಾಯ್ದೆ ರೂಪದಲ್ಲಿ ಹೊರಡಿಸುತ್ತಿದ್ದಾರೆ. ಇದರಿಂದಾಗಿಯೇ ವರ್ಗಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.

– ಎಸ್‌.ಎಲ್‌. ಭೋಜೇಗೌಡ, ವಿಧಾನ ಪರಿಷತ್‌ ಸದಸ್ಯ

* ದಾವಣಗೆರೆಯನ್ನು ‘ಶಿಕ್ಷಣ ಕಾಶಿ’ಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಉನ್ನತ ಶಿಕ್ಷಣಕ್ಕೆ ಪ್ರೌಢ ಶಿಕ್ಷಣವು ಅಡಿಪಾಯವಾಗಿದೆ. ಹೀಗಾಗಿ ಶಿಕ್ಷಕರ ಕೂಗನ್ನು ಸರ್ಕಾರ ಕೇಳಿಸಿಕೊಳ್ಳಬೇಕು.

– ಕೆ.ಆರ್‌. ಜಯಶೀಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.