ದಾವಣಗೆರೆ: ಪ್ರತಿಯೊಬ್ಬರ ಬದುಕಿನಲ್ಲಿ ಗಾಢವಾದ ಪ್ರಭಾವ ಬೀರಬಲ್ಲ ಚಿತ್ರ, ಸಂಗೀತದಂತಹ ಲಲಿತಕಲೆಗಳು ಮತ್ತು ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಇಲ್ಲಿನ ದೃಶ್ಯಕಲಾ ಕಾಲೇಜಿನ ಬಯಲು ರಂಗಮಂದಿರದಲ್ಲಿ ಕಾಲೇಜಿನ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸೃಜಶೀಲತೆ ಒಂದೇ ದಿನದಲ್ಲಿ ದಕ್ಕುವುದಿಲ್ಲ. ಕಲಾವಿದರು ಸೃಜನಶೀಲತೆ ಪಡೆಯಲು ಹತ್ತಾರು ವರ್ಷ ಕಷ್ಟಪಡುತ್ತಾರೆ. ಕಲಾವಿರ ಪರಿಶ್ರಮ ಅಷ್ಟು ಸುಲಭವಾಗಿ ಅರ್ಥ ಆಗುವುದಿಲ್ಲ. ಆದರೆ, ಕಲೆ ಮಾತ್ರ ಮುದ ನೀಡುತ್ತದೆ’ ಎಂದು ಹೇಳಿದರು.
‘ವಜ್ರಮಹೋತ್ಸವದ ಅಂಗವಾಗಿ ವರ್ಷವಿಡೀ 84 ಕಾರ್ಯಕ್ರಮ ನಡೆಸಿದ್ದು ಶ್ಲಾಘನೀಯ. ದೇಶ, ವಿದೇಶದಲ್ಲಿ ಚದುರಿ ಹೋಗಿದ್ದ ಹಳೆಯ ವಿದ್ಯಾರ್ಥಿಗಳನ್ನು ಮರಳಿ ಕಾಲೇಜಿಗೆ ಕರೆತಂದ ಪರಿ ಅವಿಸ್ಮರಣೀಯ. ಕ್ಯಾಂಟೀನ್ ಕೆಲಸ ಮಾಡಲು ದೃಶ್ಯಕಲಾ ಕಾಲೇಜಿಗೆ ಬಂದಿದ್ದ ಹರೀಶ್ ಆಚಾರ್ಯ ಅವರು ಕಲಾ ನಿರ್ದೇಶಕರಾಗಿ ಮುಂಬೈನಲ್ಲಿ ಬದುಕು ಕಟ್ಟಿಕೊಂಡ ಯಶೋಗಾಥೆ ಮರೆಯಲು ಸಾಧ್ಯವಿಲ್ಲ’ ಎಂದರು.
‘ದೃಶ್ಯಕಲಾ ಕಾಲೇಜಿನ ಅಭಿವೃದ್ಧಿಗೆ ಸಂಸದರ ನಿಧಿಯಿಂದ ₹ 12 ಲಕ್ಷ ಅನುದಾನ ನೀಡಲಾಗಿದೆ. ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅಂಗವಾಗಿ ಮತ್ತೆ ₹ 3 ಲಕ್ಷ ಅನುದಾನ ನೀಡಲಾಗುತ್ತಿದೆ. ಕಾಲೇಜು ಆವರಣದಲ್ಲಿ ಸಸಿನೆಟ್ಟು ಪೋಷಣೆ ಮಾಡಬೇಕಿದೆ. ಕಾಲೇಜು ಕ್ಯಾಂಪಸ್ ಇನ್ನಷ್ಟು ಸುಂದರವಾಗಿ ರೂಪುಗೊಳ್ಳಬೇಕಿದೆ. ಇದೊಂದು ಜನಾಕರ್ಷಣೆಯ ಕೇಂದ್ರವಾಗಬೇಕಿದೆ’ ಎಂದರು.
‘ಮೊಬೈಲ್ ಫೋನ್ ವ್ಯಾಮೋಹದಿಂದ ವಿದ್ಯಾರ್ಥಿಗಳನ್ನು ಹೊರತರಲು ಚಿತ್ರಕಲೆಯಿಂದ ಮಾತ್ರ ಸಾಧ್ಯವಿದೆ. ಬೇಸಿಗೆ ರಜೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಕುರಿತು ಶಿಬಿರ ನಡೆಸುವ ಅಗತ್ಯವಿದೆ. ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿದ ವಿದ್ಯಾರ್ಥಿಗಳ ಬೆಳವಣಿಗೆ ಭಿನ್ನವಾಗಿರುತ್ತದೆ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.
‘ಸಕ್ರಿಯ ರಾಜಕಾರಣಕ್ಕೆ ಬರುವ ಕುರಿತಾದ ಪ್ರಶ್ನೆಯೊಂದು ವರ್ಷದ ಹಿಂದೆ ಮೊದಲ ಬಾರಿಗೆ ದೃಶ್ಯ ಕಲಾ ಕಾಲೇಜು ಆವರಣದಲ್ಲಿ ಎದುರಾಗಿತ್ತು. ಆಗಿನ್ನೂ ಚುನಾವಣೆಗೆ ಸ್ಪರ್ಧಿಸುವ ಕುರಿತು ಕುಟುಂಬದಲ್ಲಿ ಕೂಡ ಚರ್ಚಿಸಿರಲಿಲ್ಲ. ಸಂಸದೆಯಾಗಿ ಜೂನ್ 7ಕ್ಕೆ ಒಂದು ವರ್ಷ ತುಂಬುತ್ತದೆ. ಈ ಹುದ್ದೆ ಸಾಕಷ್ಟು ಅನುಭವ ನೀಡಿದೆ. ಗಿಗ್ ಕಾರ್ಮಿಕರಿಂದ ಹಿಡಿದು ಹಲವು ರೀತಿಯ ಜನಸಮೂಹದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ’ ಎಂದರು.
‘ದೃಶ್ಯಕಲಾ ಕಾಲೇಜಿನ ವಜ್ರಮಹೋತ್ಸವ ಸಂಭ್ರಮವನ್ನು ವರ್ಷವಿಡೀ ಆಚರಿಸಿದ್ದೇವೆ. ಇದರ ಭಾಗವಾಗಿ ಚಿತ್ರಕಲಾ ಶಿಬಿರ, ಕಾರ್ಯಾಗಾರ, ವಿಚಾರ ಸಂಕಿರಣ, ಶಿಲ್ಪಕಲಾ ಪ್ರದರ್ಶನಗಳನ್ನು ಪ್ರತಿ ತಿಂಗಳು ಮಾಡಿದ್ದೇವೆ. ಕಲಾವಿದರಿಗೆ ಅಗತ್ಯ ಕೌಶಲಗಳನ್ನು ನೀಡಿದ್ದೇವೆ. ಇದನ್ನು 75ನೇ ವರ್ಷಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ’ ಎಂದು ಪ್ರಾಂಶುಪಾಲ ಜೈರಾಜ್ ಚಿಕ್ಕಪಾಟೀಲ ಮಾಹಿತಿ ನೀಡಿದರು.
ಕಲಾವಿದ ಚಿ.ಸು.ಕೃಷ್ಣಸೆಟ್ಟಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಕುಲಸಚಿವ ಶಬ್ಬೀರ ಬಾಷಾ ಗಂಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.